ಸಹ ಕೈದಿಗಳಿಂದ ಹಲ್ಲೆ: ಪಾಕ್ ಮೂಲದ ಕೈದಿ ಗಂಭೀರ
ಜಮ್ಮು ಮತ್ತು ಕಾಶ್ಮೀರದ ಜೈಲಿನಲ್ಲಿ ಸಹ ಕೈದಿಗಳಿಂದ ಹಲ್ಲೆಗೊಳಗಾಗಿದ್ದ ಪಾಕಿಸ್ತಾನ ಮೂಲದ ಕೈದಿ ಸನಾವುಲ್ಲಾ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ.
ಚಂಡೀಗಡ: ಜಮ್ಮು ಮತ್ತು ಕಾಶ್ಮೀರದ ಜೈಲಿನಲ್ಲಿ ಸಹ ಕೈದಿಗಳಿಂದ ಹಲ್ಲೆಗೊಳಗಾಗಿದ್ದ ಪಾಕಿಸ್ತಾನ ಮೂಲದ ಕೈದಿ ಸನಾವುಲ್ಲಾ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ.
ಹಲ್ಲೆಗೊಳಗಾಗಿರುವ ಕೈದಿ ಸನಾವುಲ್ಲಾ ಆರೋಗ್ಯದ ಕುರಿತು ಮಾಹಿತಿ ನೀಡಿರುವ ಚಂಡೀಗಡ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಆಸ್ಪತ್ರೆಯ ವೈದ್ಯರು, ಸನಾವುಲ್ಲಾ ಆರೋಗ್ಯ ಗಂಭೀರವಾಗ ತೊಡಗಿದೆ. ತಲೆಗೆ ಬಿದ್ದಿರುವ ಪೆಟ್ಟು ತೀವ್ರವಾಗಿದೆ ಎಂದು ತಿಳಿಸಿದ್ದಾರೆ. ಈ ನಡುವೆ ಕೈದಿ ಸನಾವುಲ್ಲಾನ ಆರೋಗ್ಯ ವಿಚಾರಿಸಲು ಪಾಕಿಸ್ತಾನ ರಾಯಭಾರ ಕಚೇರಿಯ ಅಧಿಕಾರಿಗಳು ಇಂದು ಚಂಡೀಗಡದ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರೊಂದಿಗೆ ಚರ್ಚೆ ನಡೆಸಿದ್ದಾರೆ. ಅಲ್ಲದೆ ಸನಾವುಲ್ಲಾರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರನ್ನು ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗಂಭೀರವಾಗಿ ಹಲ್ಲೆಗೊಳಗಾಗಿರುವ ಸನಾವುಲ್ಲಾನನ್ನು ತೀವ್ರನಿಗಾ ಘಟಕದಲ್ಲಿಟ್ಟು, ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಗಾಗಿ ಸನಾವುಲ್ಲಾನನ್ನು ಹೊರದೇಶಕ್ಕೆ ರವಾನಿಸುವ ಸಾಧ್ಯತೆಯನ್ನು ಆಸ್ಪತ್ರೆಯ ವೈದ್ಯರು ಮತ್ತು ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ತಳ್ಳಿಹಾಕಿದ್ದಾರೆ.
ಲಾಹೋರ್ನ ಕೋಟ್ ಲಕಪತ್ ಜೈಲಿನಲ್ಲಿ ಸಹ ಕೈದಿಗಳಿಂದ ಗಂಭೀರವಾಗಿ ಹಲ್ಲೆಗೊಳಗಾಗಿದ್ದ ಭಾರತೀಯ ಮೂಲದ ಕೈದಿ ಸರಬ್ಜಿತ್ ಸಿಂಗ್ ಸಾವನ್ನಪ್ಪಿದ ಮರುದಿನವೇ ಸನಾವುಲ್ಲಾನ ಮೇಲೆ ಭಾರತದಲ್ಲಿ ಹಲ್ಲೆಯಾಗಿದೆ. ಸರಬ್ಜಿತ್ ಸಿಂಗ್ ಹತ್ಯೆಯ ಪ್ರತೀಕವಾಗಿ ಈ ಹಲ್ಲೆ ನಡೆಸಲಾಗಿದೆ ಎಂದು ಹೇಳಲಾಗುತ್ತಿತ್ತು.