ಈಶ್ವರಪ್ಪ, ಪರಮೇಶ್ವರ್ ಸೇರಿ ಘಟಾನುಘಟಿಗಳಿಗೆ ಸೋಲು
ಕರ್ನಾಟಕ ವಿಧಾನಸಭೆಯಲ್ಲಿ ಗೆಲುವಿನ ಭಾರಿ ನಿರೀಕ್ಷೆ ಹುಟ್ಟಿಸಿದ್ದ ಘಟಾನುಘಟಿ ನಾಯಕರು ಸೋಲು ಕಾಣುವ ಮೂಲಕ ಅಚ್ಚರಿಗೆ...
ಬೆಂಗಳೂರು: ಕರ್ನಾಟಕ ವಿಧಾನಸಭೆಯಲ್ಲಿ ಗೆಲುವಿನ ಭಾರಿ ನಿರೀಕ್ಷೆ ಹುಟ್ಟಿಸಿದ್ದ ಘಟಾನುಘಟಿ ನಾಯಕರು ಸೋಲು ಕಾಣುವ ಮೂಲಕ ಅಚ್ಚರಿಗೆ ಕಾರಣವಾಗಿದ್ದಾರೆ.
ಉಪ ಮುಖ್ಯಮಂತ್ರಿ ಈಶ್ವರಪ್ಪ ಸೇರಿದಂತೆ ಬಿಜೆಪಿಯ ಘಟಾನುಘಟಿ ನಾಯಕರುಗಳು ಸೋಲು ಕಾಣುವ ಮೂಲಕ ತೀವ್ರ ಮುಖಭಂಗ ಅನುಭವಿಸಿದ್ದಾರೆ. ಅಂತೆಯೇ ಕಾಂಗ್ರೆಸ್ನ ಭಾವಿ ಮುಖ್ಯಮಂತ್ರಿ ಎಂದೇ ಬಿಂಬಿತರಾಗಿದ್ದ ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಅವರು 19 ಸಾವಿರ ಭಾರಿ ಮತಗಳ ಅಂತರದ ಮೂಲಕ ಸೋಲು ಕಂಡಿದ್ದಾರೆ. ಅಲ್ಲದೆ ಅವರ ಮುಖ್ಯಮಂತ್ರಿ ಪದವಿ ಪಡೆವ ಕಾರ್ಯಕ್ಕೆ ತೀವ್ರ ಹಿನ್ನಡೆಯಾಗಿದೆ. ಚೆನ್ನಪಟ್ಟಣ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಮಾಡಿದ್ದ ಜೆಡಿಎಸ್ ಅನಿತಾ ಕುಮಾರಸ್ವಾಮಿ ಅವರು ಪಕ್ಷೇತರ ಅಭ್ಯರ್ಥಿ ಮಾಜಿ ಸಚಿವ ಯೋಗೀಶ್ವರ್ ಅವರ ವಿರುದ್ಧ ಹೀನಾಯವಾಗಿ ಸೋಲುಂಡಿದ್ದಾರೆ.
ಅಂತೆಯೇ ಪಕ್ಷದಿಂದ ಪಕ್ಷಕ್ಕೆ ಜಿಗಿಯುತ್ತಾ ತಮ್ಮ ರಾಜಕೀಯ ಜೀವನದ ಅಭಿಯಾನ ಆರಂಭಿಸಿದ್ದ ಮಳೆ ಹುಡುಗಿ ಪೂಜಾಗಾಂಧಿ ಅವರು, ಬಿಎಸ್ಆರ್ ಪಕ್ಷದ ಪರವಾಗಿ ರಾಯಚೂರು ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಶ್ರೀರಾಮುಲು ಅವರ ಸ್ಟಾರ್ ಪ್ರಚಾರದ ನಡುವೆಯೂ ಅವರು ಠೇವಣಿ ಕಳೆದುಕೊಳ್ಳುವ ಮೂಲಕ ತೀವ್ರ ಮುಖಭಂಗ ಅನುಭವಿಸಿದ್ದಾರೆ.
ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಘಟಾನುಘಟಿ ನಾಯಕರೂ ಸಹ ಪ್ರಸಕ್ತ ಚುನಾವಣೆಯಲ್ಲಿ ಮುಗ್ಗರಿಸಿದ್ದಾರೆ. ಬಿಜೆಪಿ ತೊರೆದು ಕೆಜಿಪಿ ಸೇರಿದ್ದ ಮಾಜಿ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರು, ತಮ್ಮ ಸ್ವಕ್ಷೇತ್ರವನ್ನು ತೊರೆದು ರಾಜಾಜಿ ನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಬಿಜೆಪಿಯ ಹಿರಿಯ ನಾಯಕ ಸುರೇಶ್ ಕುಮಾರ್ ಅವರ ವರ್ಚಸ್ಸಿನ ಮುಂದೆ ಮಂಕಾ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ್ದಾರೆ. ಅಂತೆಯೇ ವಿಧಾನಸಭೆ ಕಲಾಪದಲ್ಲಿ ನೀಲಿ ಚಿತ್ರವೀಕ್ಷಿಸಿದ್ದ 'ಬ್ಲೂಬಾಯ್ಸ್' ಸಚಿವತ್ರಯರಾದ ನರಗುಂದ ಕ್ಷೇತ್ರದ ಅಭ್ಯರ್ಥಿ ಸಿಸಿ ಪಾಟೀಲ್, ಮಾಜಿ ಬಂದರು ಖಾತೆ ಸಚಿವ ಕೃಷ್ಣಾ ಪಾಲೇಮಾರ್ ಅವರು ಹೀನಾಯವಾಗಿ ಸೋತಿದ್ದಾರೆ.
ಅಂತೆಯೇ ಹಿರೇಕೆರೂರು ಕಾಂಗ್ರೆಸ್ ಅಭ್ಯರ್ಥಿ ಬಿ.ಸಿ ಪಾಟೀಲ್, ಹಾನಗಲ್ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಸಿ.ಎಂ.ಉದಾಸಿ, ತುಮಕೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೊಗಡು ಶಿವಣ್ಣ, ಮಾಲೂರು ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿದ್ದ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ, ವಿಜಯ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ವಿ.ಸೋಮಣ್ಣ ಸೋಲು ಕಂಡಿದ್ದಾರೆ.
ಅಲ್ಲದೆ ಪ್ರಮುಖ ನಾಯಕರಾದ ಬಸವನಗುಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿಕೆ ಚಂದ್ರಶೇಖರ, ಹೊಸಕೋಟೆಯ ಬಿಜೆಪಿ ಅಭ್ಯರ್ಥಿ ಮತ್ತು ಕಾರ್ಮಿಕ ಸಚಿವ ಬಚ್ಚೇಗೌಡ, ಕನಕಪುರ ಜೆಡಿಎಸ್ ಅಭ್ಯರ್ಥಿ ಪಿಜಿಆರ್ ಸಿಂಧ್ಯಾ, ಮೈಸೂರಿನ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ರಾಮದಾಸ್ ಅವರು, ಭದ್ರಾವತಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿಎಂ ಇಬ್ರಾಹಿಂ, ಚಾಮರಾಜನಗರ ಕ್ಷೇತ್ರದ ಅಭ್ಯರ್ಥಿ ವಾಟಾಳ್ ನಾಗರಾಜ್, ಬೀಳಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮತ್ತು ಕೈಗಾರಿಕಾ ಸಚಿವ ಮುರೇಗೇಶ್ ನಿರಾಣಿ, ಬಿಜಾಪುರದ ಜೆಡಿಎಸ್ ಅಭ್ಯರ್ಥಿ ಬಸವರಾಜ್ ಯತ್ನಾಳ್, ಸುರಪುರದ ಜೆಡಿಎಸ್ ಅಭ್ಯರ್ಥಿ ಮಾಜಿ ಸಚಿವ ರಾಜೂಗೌಡ, ದೇವದುರ್ಗದ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ್ ಅವರು ಸೋತಿದ್ದಾರೆ.
ಕೆಜೆಪಿಯ ಹರಿಹರ ಶಾಸಕ ಬಿಪಿ ಹರೀಶ್, ಹೊಸದುರ್ಗದ ಪಕ್ಷೇತರ ಅಭ್ಯರ್ಥಿ ಮತ್ತು ಮಾಜಿ ಸಚಿವ ಗೂಳಿಹಟ್ಟಿ ಶೇಖರ್, ಸೊರಭ ಕಾಂಗ್ರೆಸ್ ಅಭ್ಯರ್ಥಿ ಕುಮಾರ್ ಬಂಗಾರಪ್ಪ, ಕೆಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ, ತುಮಕೂರು ಕ್ಷೇತ್ರದ ಸೊಗಡು ಶಿವಣ್ಣ, ದಾಸರಹಳ್ಳಿ ಕಾಂಗ್ರೆಸ್ ಅಭ್ಯರ್ಥಿ ಬಿಎಲ್ ಶಂಕರ್ ಮತ್ತು ಸಾಗರ ಕ್ಷೇತ್ರದಿಂದ ಬೇಳೂರುಗೋಪಾಲಕೃಷ್ಣ, ದೊಡ್ಡಬಳ್ಳಾಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಸಿ.ಚೆನ್ನಿಗಪ್ಪ ಅವರು ಸೋಲುಂಡಿದ್ದಾರೆ. ಅಂತೆಯೇ ಭಾವಿ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿತರಾಗಿದ್ದ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರು ಕೂಡ ಸೋಲನ್ನು ಅನುಭವಿಸಿರುವುದು ಅಚ್ಚರಿ ಮೂಡಿಸಿದೆ.
ಒಟ್ಟಾರೆ ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿಯ ಬಹುತೇಕ ಸಚಿವರು ತಮ್ಮ ತಮ್ಮ ಕ್ಷೇತ್ರಗಳನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದ್ದಾರೆ. ಅದರಲ್ಲಿಯೂ ಕಳೆದ ಚುನಾವಣೆಯಲ್ಲಿ ಬಿಜೆಪಿ ಭದ್ರಕೋಟೆಯಂತಿದ್ದ ಶಿವಮೊಗ್ಗ ಜಿಲ್ಲೆಯಲ್ಲಿ ಪಕ್ಷ ನೆಲಕಚ್ಚಿದ್ದು, ಒಂದೂ ಸ್ಥಾನವನ್ನು ಗೆಲ್ಲದೇ ತೀವ್ರ ಮುಖಭಂಗ ಅನುಭವಿಸಿದೆ.