ಚುನಾವಣಾ ಫಲಿತಾಂಶ: ನಾಯಕರು ಏನಂತಾರೆ?
ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ವಿವಿಧ ನಾಯಕರು ಗೆಲುವು ಮತ್ತು ಸೋಲಿನ ಕುರಿತು ತಂತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಬೆಂಗಳೂರು: ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ತಮ್ಮ ತಮ್ಮ ಗೆಲುವು ಮತ್ತು ಸೋಲಿನ ಕುರಿತು ವಿವಿಧ ನಾಯಕರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಫಲಿತಾಂಶ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ವಿವಿಧ ನಾಯಕರ ಪ್ರತಿಕ್ರಿಯೆ ಹೀಗಿದೆ.
ಅಂಬರೀಶ್ ಅವರಿಗೆ ಮತ ನೀಡಿದ ಮಂಡ್ಯ ಜನತೆಗೆ ಧನ್ಯಾವಾದ. ಪ್ರತಿಪಕ್ಷಗಳ ಹಣ ಮತ್ತು ರಾಜಕೀಯ ಪ್ರಭಾವಕ್ಕೆ ಒಳಗಾಗದೇ ಪ್ರಮಾಣಿಕತೆಗೆ ಜನತೆ ಮತ ನೀಡಿದ್ದಾರೆ.
-ಸುಮಲತಾ, ನಟ ಅಂಬರೀಶ್ ಪತ್ನಿ
ಕಾಂಗ್ರೆಸ್ ಗೆಲುವಿಗೆ ಮಾಧ್ಯಮಗಳೇ ಕಾರಣ. ವಿನಾಕಾರಣ ಸಮೀಕ್ಷೆಗಳ ಹೆಸರಲ್ಲಿ ಕಾಂಗ್ರೆಸ್ ಪರವಾಗಿ ಪರೋಕ್ಷ ಪ್ರಚಾರ ಮಾಡಿದರು. ಬಿಜೆಪಿ ಪಕ್ಷ ಮಾಡಿದ್ದಕ್ಕಿಂತ ದುಪ್ಪಟ್ಟು ಪ್ರಮಾಣದಲ್ಲಿ ಭ್ರಷ್ಟಾಚಾರ ಮಾಡಿದ ಕಾಂಗ್ರೆಸ್ ಪಕ್ಷಕ್ಕೆ ಜನತೆ ಮತ ನೀಡಿದ್ದಾರೆ. ಇದು ನನಗೆ ತೀವ್ರ ನಿರಾಸೆ ಉಂಟುಮಾಡಿದೆ.
-ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ
ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಸಾಬೀತಾಗಿದೆ. ವರುಣಾ ಕ್ಷೇತ್ರದಲ್ಲಿ ನನ್ನ ಗೆಲುವು ಮೊದಲೇ ತಿಳಿದಿತ್ತು. ನಿರೀಕ್ಷೆಯಂತೆಯೇ 15 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದೇನೆ. ಮುಖ್ಯಮಂತ್ರಿ ಹುದ್ದೆಯ ಕುರಿತು ಚರ್ಚಿಸಲು ಹೈಕಮಾಂಡ್ ಬುಲಾವ್ ನೀಡಿದರೆ ದೆಹಲಿಗೆ ಹೋಗುತ್ತೇನೆ.
-ಸಿದ್ಧರಾಮಯ್ಯ, ಕಾಂಗ್ರೆಸ್ ಮುಖಂಡ
ಕನಕಪುರದಲ್ಲಿ ನಡೆದದ್ದು ಡಿಕೆಶಿ ಮತ್ತು ಸಿಂಧ್ಯಾ ಅವರ ನಡುವಿನ ಚುನಾವಣೆಯಲ್ಲ. ಬದಲಿಗೆ ಸತ್ಯ ಮತ್ತು ಸುಳ್ಳಿನ ನಡುವಿನ ಚುನಾವಣೆಯಾಗಿತ್ತು. ಆದರೆ ಕನಕಪುರ ಜನತೆ ಸತ್ಯಕ್ಕೆ ಬೆಲೆ ನೀಡಿ ನನ್ನನು ಜಯಶಾಲಿಯನ್ನಾಗಿಸಿದ್ದಾರೆ. ಇದಕ್ಕಾಗಿ ಕನಕಪುರ ಮತದಾರರಿಗೆ ನನ್ನ ಧನ್ಯವಾದಗಳನ್ನು ತಿಳಿಸುತ್ತೇನೆ. ಮುಂದೆ ನನ್ನ ಮುಂದೆ ದೊಡ್ಡ ಜವಾಬ್ದಾರಿ ಇದೆ. ರಾಜ್ಯದಲ್ಲಿ ಕಾಂಗ್ರೆಸ್ ಉತ್ತಮ ಸರ್ಕಾರ ನೀಡಲಿದೆ. ಮುಖ್ಯಮಂತ್ರಿ ಹುದ್ದೆ ಕುರಿತು ಶಾಸಕರ ಮತ್ತು ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ಕೈಗೊಳ್ಳುತ್ತೇನೆ. ಆದರೆ ನಾನು ಪಕ್ಷದ ಏಳಿಗೆಗೆ ಬಹಳ ವರ್ಷಗಳಿಂದ ದುಡಿದಿದ್ದೇನೆ. ಹೀಗಾಗಿ ಮುಖ್ಯಮಂತ್ರಿ ಹುದ್ದೆಗೆ ನಾನು ಕೂಡ ಓರ್ವ ಆಕಾಂಕ್ಷಿ.
-ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಮುಖಂಡ
ಕಾಂಗ್ರೆಸ್ ಮೇಲೆ ವಿಶ್ವಾಸವಿಟ್ಟು ಮತ ನೀಡಿದ್ದಾರೆ. ನನಗೆ ಮತನೀಡಿದ ಶಾಂತಿನಗರ ಜನತೆಗೆ ನನ್ನ ಹೃತ್ಪೂರ್ವಕ ವಂದನೆಗಳು. ಜನತೆಯ ನಂಬಿಕೆಯನ್ನು ಉಳಿಸಿಕೊಳುಳುತ್ತೇವೆ. ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಜನತೆಯ ಅಭಿಲಾಶೆಗಳಿಗೆ ಸ್ಪಂಧಿಸಿ, ಅಭಿವೃದ್ದಿಗೆ ಪ್ರಯತ್ನಿಸುತ್ತೇನೆ.
-ಹ್ಯಾರಿಸ್, ಕಾಂಗ್ರೆಸ್ ಮುಖಂಡ
ಸುಶಿಕ್ಷಿತರ ಕ್ಷೇತ್ರವೆಂದೇ ಹೆಸರಾಗಿದ್ದ ರಾಜಾಜಿನಗರ ಕ್ಷೇತ್ರದ ಮತದಾರರು ನನ್ನ ಮೇಲೆ ನಂಬಿಕೆ ಇಟ್ಟು ಮತ ನೀಡಿದ್ದಾರೆ. ಇಲ್ಲಿ ಸ್ಪರ್ಧೆ ಇದದ್ದು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮಾತ್ರ. ಕ್ಷೇತ್ರದ ಜನರ ಅಭಿಲಾಶೆಗಳ ಪರವಾಗಿ ಸ್ಪಂದಿಸಿ ಅವರ ಸೇವೆ ಮಾಡುತ್ತೇನೆ. ಕ್ಷೇತ್ರದ ಗೆಲುವಿಗಿಂತ ರಾಜ್ಯದ ಸೋಲು ನನಗೆ ತೀವ್ರ ನೋವು ತಂದಿದೆ. ನಾವು ಎಂದಿಗೂ ಅಭಿವೃದ್ಧಿಯನ್ನು ಕಡೆಗಣಿಸಿರಲಿಲ್ಲ. ಜನತೆಯ ತೀರ್ಪಿಗೆ ನಾವು ತಲೆ ಬಾಗುತ್ತೇವೆ.
-ಸುರೇಶ್ ಕುಮಾರ್, ಬಿಜೆಪಿ ಮುಖಂಡ