ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕೋಲ್‌ಗೇಟ್: ಅಶ್ವನಿ ಕುಮಾರ್ ತಲೆದಂಡ?

ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ತೀವ್ರ ಟೀಕೆಗೆ ಗುರಿಯಾಗಿರುವ ಕೇಂದ್ರಸರ್ಕಾರ ಕೊನೆಗೂ..

Srinivasa Murthy VN
Updated On : 9 May 2013, 4:27 am

ನವದೆಹಲಿ: ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಿಂದ ತೀವ್ರ ಟೀಕೆಗೆ ಗುರಿಯಾಗಿರುವ ಕೇಂದ್ರಸರ್ಕಾರ ಕೊನೆಗೂ ಕಾನೂನು ಸಚಿವ ಅಶ್ವನಿ ಕುಮಾರ್ ಅವರ ತಲೆದಂಡಕ್ಕೆ ಮುಂದಾಗಿದೆ.

ಕಲ್ಲಿದಲು ಹಗರಣವನ್ನು ತನಿಖೆ ನಡೆಸುತ್ತಿರುವ ಸಿಬಿಐ ಸಂಸ್ಥೆಯ ತನಿಖಾ ವರದಿಯಲ್ಲಿ ತಿದ್ದುಪಡಿ ತಂದ ಆರೋಪದ ಮೇರೆಗೆ ಕೇಂದ್ರಸರ್ಕಾರ ನ್ಯಾಯಾಲಯದ ತೀವ್ರ ಟೀಕೆಗೆ ಗುರಿಯಾಗಿದ್ದು, ಮುಜುಗರ ತಪ್ಪಿಸಿಕೊಳ್ಳಲು ಕಾನೂನು ಸಚಿವರ ರಾಜಿನಾಮೆ ಪಡೆಯಲು ಮುಂದಾಗಿದೆ. ಇದಕ್ಕಾಗಿ ಇಂದು ಕೇಂದ್ರ ಕಾನೂನು ಸಚಿವ ಅಶ್ವನಿ ಕುಮಾರ್ ಮತ್ತು ಅಟಾರ್ನಿ ಜನರಲ್ ಜಿಇ ವಹನ್ವತಿ ಅವರೊಂದಿಗೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಒಂದು ಸುತ್ತು ಚರ್ಚೆ ನಡೆಸಿದ್ದಾರೆ.

ಅಲ್ಲದೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಹಗರಣ ಕುರಿತು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿಮಾಡಿ ಚರ್ಚಿಸಲಿದ್ದಾರೆ. ಈ ನಡುವೆ ಪ್ರತಿಪಕ್ಷಗಳು ಅಶ್ವನಿಕುಮಾರ್ ಮತ್ತು ರೇಲ್ವೆ ಸಚಿವ ಪಿ.ಕೆ. ಬನ್ಸಾಲ್ ಅವರ ರಾಜಿನಾಮೆಗೆ ಪಟ್ಟು ಹಿಡಿದಿದ್ದು, ಕೇಂದ್ರದ ಮೇಲೆ ಒತ್ತಡ ಹೆಚ್ಚಾಗುವಂತೆ ಮಾಡಿದೆ. ಆದರೆ ಬನ್ಸಾಲ್ ಅವರ ರಾಜಿನಾಮೆಗೆ ಕಾಂಗ್ರೆಸ್ ಹೈಕಮಾಂಡ್ ವಿರೋಧ ವ್ಯಕ್ತಪಡಿಸಿದೆ.

ಆದರೆ ಅಶ್ವನಿ ಕುಮಾರ್ ಅವರ ರಾಜಿನಾಮೆಗೆ ಪಕ್ಷದ ಕೆಲವು ಸದಸ್ಯರು ಒಲವು ವ್ಯಕ್ತಪಡಿಸಿರುವುದರಿಂದ ಮತ್ತು ಸ್ವತಃ ಪ್ರಧಾನಿ ಮನಮೋಹನ್ ಸಿಂಗ್ ಅವರು ಕೂಡ ಅಶ್ವನಿ ಕುಮಾರ್ ಅವರ ಕಾರ್ಯದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿರುವುದರಿಂದ ಕಾನೂನು ಸಚಿವರ ತಲೆದಂಡ ಬಹುತೇಕ ಖಚಿತವಾಗಿದೆ. ಕೇವಲ ಕಾನೂನು ರೀತಿಯ ಕ್ರಮಗಳು ಮಾತ್ರ ಬಾಕಿ ಇದ್ದು, ರಾಜಿನಾಮೆ ಯಾವಾಗ ನೀಡಬೇಕು ಎನ್ನುವುದರ ಕುರಿತು ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಪರಸ್ಪರ ಚರ್ಚಿಸಿ ನಿರ್ಧಾರ ಕೈಗೊಳ್ಳಲ್ಲಿದ್ದಾರೆ.

ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಡವಳಿಕೆ ವಿರುದ್ಧ ಸುಪ್ರೀಂ ಕೋರ್ಟ್ ತನ್ನ ಅಸಮಾಧಾನ ವ್ಯಕ್ತಪಡಿಸಿತ್ತು. ಸಿಬಿಐ ವರದಿಯಲ್ಲಿ ತಿದ್ದುಪಡಿ ತಂದ ಅಶ್ವನಿಕುಮಾರ್ ಅವರಿಗೆ ಮತ್ತು ಕಾನೂನು ಸಚಿವಾಲಯ, ಪ್ರಧಾನಿ ಕಚೇರಿಯ ಅಧಿಕಾರಿಗಳಿಗೆ ನ್ಯಾಯಾಲಯ ಎಚ್ಚರಿಕೆ ನೀಡಿತ್ತು. ಅಲ್ಲದೆ ಸಿಬಿಐಯನ್ನು ಸ್ವಾಯತ್ತ ಗೊಳಿಸಿ, ಅದನ್ನು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಿ ಇಲ್ಲವಾದರೆ ಮಧ್ಯಪ್ರವೇಶ ಮಾಡಬೇಕಾಗುತ್ತದೆ ಎಂದು ಕೇಂದ್ರಸರ್ಕಾರಕ್ಕೆ ನ್ಯಾಯಾಲಯ ನಿನ್ನೆ ಎಚ್ಚರಿಕೆ ನೀಡಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement