ಸಿಖ್ ನರಮೇಧ: ಮೂವರಿಗೆ ಜೀವಾವಧಿ ಶಿಕ್ಷೆ
1984ರ ಸಿಖ್ ನರಮೇಧ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ನವದೆಹಲಿ: 1984ರ ಸಿಖ್ ನರಮೇಧ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಪ್ರಕರಣದಲ್ಲಿ ಭಾಗಿಯಾಗಿದ್ದ ಗಿರಿಧಾರಿ ಲಾಲ್, ಕ್ಯಾಪ್ಟನ್ ಭಾಗ್ಮಲ್ ಮತ್ತು ಬಲ್ವಾನ್ ಕೋಖರ್ ಎಂಬ ಮೂವರು ಅಪರಾಧಿಗಳಿಗೆ ಸುಪ್ರೀಂಕೋರ್ಟ್ ಜೀವಾವಧಿ ಶಿಕ್ಷೆ ನೀಡಿದೆ. ಅಂತೆಯೆ ಪ್ರಕರಣದಲ್ಲಿ ಪರೋಕ್ಷ ಪಾತ್ರ ವಹಿಸಿದ್ದ ಮಹೇಂದರ್ ಯಾದವ್ ಮತ್ತು ಕಿಶನ್ ಖೋಕರ್ ಎಂಬ ಮತ್ತಿಬ್ಬರು ಆರೋಪಿಗಳಿಗೆ ನ್ಯಾಯಾಲಯ 3 ವರ್ಷಗಳ ಕಠಿಣ ಕಾರಗೃಹ ಶಿಕ್ಷೆ ವಿಧಿಸಿದೆ.
1984ರ ಸಿಖ್ ನರಮೇಧ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಪರ ವಕೀಲ ಆರ್.ಎಸ್.ಚೀಮಾ ಅವರು ಮಂಡಿಸಿದ್ದ, ಮೇ 6 ಮತ್ತು ಮೇ 9ರ ವಿಚಾರಣೆಯನ್ನು ಪರಿಶೀಲಿಸಿದ ನ್ಯಾ. ಜೆ.ಆರ್.ಆರ್ಯನ್ ಅವರ ನೇತೃತ್ವದ ದೆಹಲಿ ಜಿಲ್ಲಾ ನ್ಯಾಯಾಲಯ ಇಂದು ತನ್ನ ತೀರ್ಪು ಪ್ರಕಟಿಸಿದೆ. ಶಿಕ್ಷೆಗೊಳಗಾದವರ ಪೈಕಿ ಬಲ್ವಾನ್ ಖೋಕರ್ ಮಾಜಿ ಕೌನ್ಸಿಲರ್ ಆಗಿದ್ದು, 3 ವರ್ಷಗಳ ಸಜೆಗೆ ಗುರಿಯಾಗಿರುವ ಮಹೇಂದ್ರ ಯಾದವ್ ಮಾಜಿ ಶಾಸಕರಾಗಿದ್ದರು ಎನ್ನುವುದು ವಿಶೇಷ.
1984 ನವೆಂಬರ್ 1 ರಂದು ಬೆಳಗ್ಗೆ ಗುರುದ್ವಾರ ರಾಜನಗರ ಬಳಿ ನಡೆದಿದ್ದ ಗಲಭೆ ಪ್ರಕರಣದಲ್ಲಿ 7 ಮಂದಿ ಮೃತರಾಗಿದ್ದು, 25ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಪ್ರಕರಣದಲ್ಲಿ ಈ ಐದು ಆರೋಪಿಗಳು ಭಾಗಿಯಾಗಿರುವುದು ಸಿಬಿಐ ಸಾಕ್ಷ್ಯಾಧಾರಗಳ ಮೂಲಕ ಸಾಬೀತಾಗಿದೆ. ಹೀಗಾಗಿ ಐದು ಆರೋಪಿಗಳ ಮೇಲೆ ಕೊಲೆ, ಹಿಂಸಾಚಾರಕ್ಕೆ ಪ್ರಚೋದನೆ, ಕೋಮು ಗಲಭೆಯಲ್ಲಿ ಭಾಗಿ, ಗಲಭೆಕೋರರಿಗೆ ಶಸ್ತ್ರಾಸ್ತ್ರ ರವಾನೆ ಸೇರಿದಂತೆ 5 ಹೆಚ್ಚು ದೂರುಗಳು ದಾಖಲಾಗಿದ್ದವು. ಆರೋಪಿಗಳ ಅಪರಾಧಗಳ ಪ್ರಮಾಣದ ಮೇರೆಗೆ ಅವರಿಗೆ ಶಿಕ್ಷೆಯ ಪ್ರಮಾಣ ಪ್ರಕಟಿಸಲಾಗಿದೆ.
1984ರ ಸಿಖ್ ನರಮೇಧ ಪ್ರಕರಣದ ಸಂದರ್ಭದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ದೆಹಲಿಯ ಮಾಜಿ ಕೌನ್ಸಿಲರ್ ಬಲ್ವಾನ್ ಖೋಕರ್, ಮಾಜಿ ಶಾಸಕ ಮಹೇಂದ್ರ ಯಾದವ್ ಸೇರಿದಂತೆ ಗಿರಿಧಾರ್ ಲಾಲ್, ಕ್ಯಾಪ್ಟನ್ ಭಾಗ್ಮಲ್ ಅವರನ್ನು ದೋಷಿಗಳು ಎಂದು ನ್ಯಾಯಾಲಯ ತೀರ್ಪು ನೀಡಿತ್ತು. ಅದೇ ರೀತಿ ಇಂದಿರಾಗಾಂಧಿ ಅವರ ಆಪ್ತರಾಗಿದ್ದ ಸಜ್ಜನ್ ಕುಮಾರ್ ಅವರನ್ನು ನ್ಯಾಯಾಲಯ ದೋಷಮುಕ್ತಗೊಳಿಸಿ ಪ್ರಕರಣದಿಂದ ಅವರನ್ನು ಖುಲಾಸೆಗೊಳಿಸಿತ್ತು.