ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಗೀತಿಕಾ ಶರ್ಮಾ ಹತ್ಯೆ: ಕಾಂಡಾ ವಿರುದ್ಧ ಚಾರ್ಜ್‌ಶೀಟ್

Srinivasa Murthy VN
Updated On : 10 May 2013, 7:44 am

ನವದೆಹಲಿ: ಗಗನ ಸಖಿ ಗೀತಿಕಾ ಶರ್ಮಾ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಮಾಜಿ ಸಚಿವ ಗೋಪಾಲ್ ಕಾಂಡಾ ವಿರುದ್ಧ ದೆಹಲಿ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ದಾಖಲಿಸಲಾಗಿದೆ.

ದೆಹಲಿ ನ್ಯಾಯಾಲಯದಲ್ಲಿ ಮಾಜಿ ಸಚಿವ ಗೋಪಾಲ್ ಕಾಂಡಾ ಸೇರಿದಂತೆ ಆತನ ಸಂಸ್ಥೆಯ ಉದ್ಯೋಗಿ ಅರುಣ್ ಚಡ್ಡಾ ವಿರುದ್ಧ ಕೊಲೆ, ಅತ್ಯಾಚಾರ, ಅಸಹಜ ಲೈಂಗಿಕ ಕ್ರಿಯೆ ನಡೆಸಿದ ಆರೋಪ, ಒಳಸಂಚು, ಹಸ್ತಾಕ್ಷರ ತಿದ್ದುವಿಕೆ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಕುರಿತು ಭಾರತೀಯ ದಂಡ ಸಂಹಿತೆ ಮತ್ತು ಆದಾಯ ತೆರಿಗೆ ಕಾನೂನಿನನ್ವಯ ಪ್ರಕರಣ ದಾಖಲಿಸಲಾಗಿದೆ.

ಇಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾ.ಎಸ್.ಕೆ,ಸಾವರಿಯಾ ಅವರು, ಕಾಂಡ ವಿರುದ್ಧ ತನಿಖಾಧಿಕಾರಿಗಳು ಚಾರ್ಜ್‌ಶೀಟ್‌ನಲ್ಲಿ ದಾಖಲಿಸಿರುವ ಪ್ರಕರಣಗಳು ಮೇಲ್ನೋಟಕ್ಕೆ ಸಾಬೀತಾಗಿವೆ. ಹೀಗಾಗಿ ಪ್ರಕರಣದ ವಿಚಾರಣೆಯನ್ನು ಲೈಂಗಿಕ ಅಪರಾಧಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯಕ್ಕೆ ವರ್ಗಾಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಕಳೆದ ಆಗಸ್ಟ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಗಗನ ಸಖಿ ಗೀತಿಕಾ ಶರ್ಮಾ ಅವರು, ತಮ್ಮ ಆತ್ಮಹತ್ಯೆಗೆ ಗೋಪಾಲ್ ಕಾಂಡಾ ಮತ್ತು ಇತರರು ಕಾರಣ ಎಂದು ಪತ್ರ ಬರೆದಿಟ್ಟು ನವದೆಹಲಿಯ ಅಶೋಕ್ ವಿಹಾರದ ತಮ್ಮ ನಿವಾಸದಲ್ಲಿ ಸಾವಿಗೆ ಶರಣಾಗಿದ್ದರು. ಗೋಪಾಲ್ ಕಾಂಡಾ ಅವರ ಮಾಲೀಕತ್ವದ ಎಂಡಿಎಲ್‌ಆರ್ ವಿಮಾನಯಾನ ಸಂಸ್ಥೆಯಲ್ಲಿ ಅವರು ಗಗನ ಸಖಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಸಂಸ್ಥೆಯ ಮಾಲೀಕ ಮತ್ತು ಇತರ ಸಿಬ್ಬಂಧಿಗಳು ತಮಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು ಎಂದು ಗೀತಿಕಾ ಅವರು ತಮ್ಮ ಆತ್ಮಹತ್ಯಾ ಪತ್ರದಲ್ಲಿ ಬರೆದಿದ್ದರು.

ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಈ ಪ್ರಕರಣದಿಂದಾಗಿ ಹರ್ಯಾಣ ಸಚಿವರಾಗಿದ್ದ ಗೋಪಾಲ್ ಕಾಂಡಾ ಅವರು ತಮ್ಮ ಸಚಿವ ಸ್ಥಾನವನ್ನು ಕಳೆದುಕೊಳ್ಳುವಂತಾಗಿತ್ತು. ಅಲ್ಲದೆ ಪ್ರಕರಣದಲ್ಲಿ ಪ್ರಮುಖ ಸಿನಿ ನಟಿಯೊಬ್ಬಳ ಹೆಸರು ಕೂಡ ತಳುಕು ಹಾಕಿಕೊಂಡಿತ್ತು. ಇದೀಗ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯ ಪ್ರಕರಣವನ್ನು ಲೈಂಗಿಕ ಅಪರಾಧಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement