ಪಿರಿಯಾಪಟ್ಟಣದಲ್ಲಿ ಮೇ 28ರಂದು ಮತದಾನ
ಬಿಜೆಪಿ ಅಭ್ಯರ್ಥಿಯ ಅಕಾಲಿಕ ಮರಣದಿಂದ ಮುಂದೂಡಲ್ಪಟ್ಟಿದ್ದ ಮೈಸೂರಿನ ಪಿರಿಯಾಪಟ್ಟಣ ಕ್ಷೇತ್ರದ ಚುನಾವಣೆ...
ಮೈಸೂರು: ಬಿಜೆಪಿ ಅಭ್ಯರ್ಥಿಯ ಅಕಾಲಿಕ ಮರಣದಿಂದ ಮುಂದೂಡಲ್ಪಟ್ಟಿದ್ದ ಮೈಸೂರಿನ ಪಿರಿಯಾಪಟ್ಟಣ ಕ್ಷೇತ್ರದ ಚುನಾವಣೆಯ ಮೇ 28ಕ್ಕೆ ನಿಗದಿಯಾಗಿದೆ.
ಇದೇ ತಿಂಗಳ ಮೇ 28ರಂದು ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ನಡೆಯಲ್ಲಿದ್ದು, ಮೇ 31 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಈ ಹಿಂದೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಸಣ್ಣ ಮೊಗೇಗೌಡ ಅವರು ಪ್ರಚಾರ ಮುಗಿಸಿಕೊಂಡು ಮನೆಗೆ ಬಂದ ನಂತರ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದರು.
ಪಿರಿಯಾಪಟ್ಟಣದ ಚುನಾವಣೆ ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಏಕೆಂದರೆ ಚುನಾವಣೆಯಲ್ಲಿ ತಲಾ 40 ಸ್ಥಾನಗಳನ್ನು ಪಡೆದಿರುವ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು, ವಿರೋಧ ಪಕ್ಷ ಸ್ಥಾನಕ್ಕಾಗಿ ಪೈಪೋಟಿ ನಡೆಸಲಿವೆ. ಈಗಾಗಲೇ ವಿರೋಧ ಪಕ್ಷ ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತಿದ್ದು, ಮತ ಪ್ರಮಾಣದ ಆಧಾರದ ಮೇಲೆ ವಿರೋಧ ಪಕ್ಷ ಸ್ಥಾನವನ್ನು ತಮಗೇ ನೀಡಬೇಕು ಎಂದು ಜೆಡಿಎಸ್ ವಾದಿಸುತ್ತಿದೆ. ಅಂತೆಯೇ ಬಿಜೆಪಿ ಕೂಡ ತಮಗೇ ವಿರೋಧ ಪಕ್ಷ ಸ್ಥಾನ ನೀಡಬೇಕು ಎಂದು ವಾದಿಸುತ್ತಿದೆ.
ಹೀಗಾಗಿ ಪಿರಿಯಾಪಟ್ಟಣ ಸ್ಥಾನದ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ. ಪಿರಿಯಾಪಟ್ಟಣ ಕ್ಷೇತ್ರವನ್ನು ಬಿಜೆಪಿ ಅಥವಾ ಜೆಡಿಎಸ್ ಗೆದ್ದರೆ, ಗೆದ್ದ ಪಕ್ಷ ಪ್ರಥಮ ವಿರೋಧ ಪಕ್ಷ ಸ್ಥಾನಕ್ಕೆ ನೇರವಾಗಿ ಅರ್ಹತೆ ಪಡೆಯುತ್ತದೆ. ಒಂದು ವೇಳೆ ಬಿಜೆಪಿ, ಜೆಡಿಎಸ್ ಹೊರತು ಪಡಿಸಿ, ಕಾಂಗ್ರೆಸ್ ಸೇರಿದಂತೆ ಮತ್ತಾವುದೇ ಪಕ್ಷ ಅಥವಾ ವ್ಯಕ್ತಿ ಪಿರಿಯಾಪಟ್ಟಣದಲ್ಲಿ ಜಯದಾಖಲಿಸಿದರೆ ಮತ್ತೆ ವಿರೋಧ ಪಕ್ಷ ಸ್ಥಾನಕ್ಕಾಗಿ ಉಭಯ ಪಕ್ಷಗಳ ನಡುವೆ ಸ್ಪರ್ಧೆ ಶುರುವಾಗುತ್ತದೆ.