ಸೋಮವಾರ ಸಿದ್ದು ಮಾತ್ರ ಪ್ರಮಾಣ: ಮಿಸ್ತ್ರಿ
ಸೋಮವಾರ ಸಿದ್ದರಾಮಯ್ಯ ಅವರು ಮಾತ್ರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮಧುಸೂದನ್ ಮಿಸ್ತ್ರಿ ಅವರು ಹೇಳಿದ್ದಾರೆ.
ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸೋಮವಾರ ಸಿದ್ದರಾಮಯ್ಯ ಅವರು ಮಾತ್ರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡಿರುವ ಮಧುಸೂದನ್ ಮಿಸ್ತ್ರಿ ಅವರು ಹೇಳಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಮಿಸ್ತ್ರಿ ಅವರು, ನೂತನ ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದು, ನಂತರದ ದಿನಗಳಲ್ಲಿ ಸಂಪುಟ ರಚಿಸಲಾಗುತ್ತದೆ. ನೂತನ ಸಚಿವರ ಕುರಿತು ರಾಜ್ಯ ಕಾಂಗ್ರೆಸ್ ಮುಖಂಡರೊಂದಿಗೆ ಚರ್ಚಿಸಲಾಗುತ್ತದೆ. ನಂತರ ಸಚಿವರ ಹೆಸರುಗಳನ್ನು ಹೈಕಮಾಂಡ್ ಮುಂದಿಟ್ಟು ಪಟ್ಟಿ ತಯಾರಿಸಲಾಗುತ್ತದೆ ಎಂದು ಅವರು ಹೇಳಿದರು.
ನೂತನ ಸಂಪುಟದಲ್ಲಿ ಬೆಂಗಳೂರಿನ ಕೆಲ ಪ್ರಭಾವಿ ಶಾಸಕರ ಹೆಸರುಗಳು ಕೇಳಿಬರುತ್ತಿದ್ದು, ರಾಜ್ಯ ನಾಯಕರು ಸಭೆ ನಡೆಸಿ ಸಂಭವನೀಯ ಸಚಿವರ ಹೆಸರುಗಳನ್ನು ಹೈಕಮಾಂಡ್ಗೆ ಸೂಚಿಸಲಿದ್ದಾರೆ. ಕೇಂದ್ರ ನಾಯಕರು ಪಟ್ಟಿಯನ್ನು ಅಂತಿಮಗೊಳಿಸಲಿದ್ದು, ಸೋಮವಾರದ ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಂತರ ಸಚಿವ ಸಂಪುಟ ವಿಸ್ತಾರ ಕಾರ್ಯಕ್ಕೆ ಚಾಲನೆ ದೊರೆಯಲಿದೆ.