ಕಾಡಾನೆ ಲಗ್ಗೆ: ಅರಣ್ಯ ಸಿಬ್ಬಂದಿಗಳ ಹರ ಸಾಹಸ
ಬೆಂಗಳೂರು: ಬೆಂಗಳೂರಿನ ಹೊರವಲಯದಲ್ಲಿರುವ ಹೊಸೂರಿಗೆ ನಾಲ್ಕು ಆನೆಗಳು ಲಗ್ಗೆ ಇಟ್ಟಿದ್ದು, ಆನೆಗಳನ್ನು ಕಾಡಿಗೆ ಅಟ್ಟಲು ಅರಣ್ಯ ಸಿಬ್ಬಂದಿ ಹರ ಸಾಹಸ ಪಡುತ್ತಿದ್ದಾರೆ.
ನಿನ್ನೆ ರಾತ್ರಿ ಚಿಕ್ಕ ತಿರುಪತಿಯಿಂದ ಹೊಸೂರಿಗೆ ಆಗಮಿಸಿರುವ ಈ ಆನೆಗಳು ರಾಮಪ್ಪ ಎಂಬ ಓರ್ವ ವೃದ್ಧ ರೈತನನ್ನು ಕೊಂದುಹಾಕಿದ್ದವು. ಅಲ್ಲದೆ ಆನೆಗಳ ತಿವಿತಕ್ಕೆ ಒಳಗಾಗಿ ಚಿಕ್ಕ ತಿರುಪತಿಯಲ್ಲಿ ಓರ್ವ ವ್ಯಕ್ತಿ ಗಾಯಗೊಂಡಿದ್ದನು. ಇದೀಗ ಹೊಸರಿಗೆ ಆಗಮಿಸಿರುವ ಆನೆಗಳು ಸ್ಥಳೀಯ ಜನರಲ್ಲಿ ಭೀತಿ ಉಂಟುಮಾಡಿವೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಿಮಿಸಿರುವ ಅರಣ್ಯ ಸಿಬ್ಬಂದಿ, ಆನೆಗಳನ್ನು ಕಾಡಿಗೆ ಅಟ್ಟಲು ಹರಸಾಹಸ ಪಡುತ್ತಿದ್ದಾರೆ.
ಪ್ರಸ್ತುತ ಹೊಸೂರಿನ ಸ್ಥಳೀಯರಿಗೆ ಸೇರಿದ ಸಿಲ್ಕ್ ಫಾರ್ಮ್‌ನಲ್ಲಿ ಎಲ್ಲ ನಾಲ್ಕು ಆನೆಗಳು ಬೀಡು ಬಿಟ್ಟಿದ್ದು, ಅಲ್ಲಿಂದಲೇ ಅವುಗಳನ್ನು ಕಾಡಿಗಟ್ಟಲು ಅರಣ್ಯ ಸಿಬ್ಬಂದಿ ಪ್ರಯತ್ನಿಸುತ್ತಿದ್ದಾರೆ. ಆನೆಗಳು ಹೊಟ್ಟೆ ಹಸಿವಾದಾಗ ಕ್ರೋಧಗೊಳ್ಳುತ್ತವೆ ಎಂಬ ಕಾರಣದಿಂದಾಗಿ ಅವುಗಳಿಗೆ ಮಾವು ಮತ್ತು ಹಲಸಿನ ಹಣ್ಣುಗಳನ್ನು ನೀಡಲಾಗುತ್ತಿದ್ದು, ಪೈಪುಗಳ ಮೂಲಕ ಆನೆಗಳಿಗೆ ಕುಡಿಯಲು ನೀರನ್ನು ಕೂಡ ಪೂರೈಸಲಾಗುತ್ತಿದೆ.
ಆನೆಗಳು ಫಾರ್ಮ್‌ನಲ್ಲಿ ಸಿಲುಕಿಕೊಂಡಿರುವ ವಿಷಯ ತಿಳಿಯುತ್ತಿದ್ದಂತೆ, ನೂರಾರು ಜನರು ಸ್ಥಳಕ್ಕಾಗಮಿಸಿದ್ದಾರೆ. ಇದರಿಂದಾಗಿ ಅರಣ್ಯ ಸಿಬ್ಬಂದಿಗಳ ಕಾರ್ಯಾಚರಣೆಗೆ ತೊಡಕಾಗಿದೆ. ಅಲ್ಲದೆ ತೋಪಿನಲ್ಲಿ ಬೀಡು ಬಿಟ್ಟಿರುವ ಆನೆಗಳು ಜನರ ಕೂಗಾಟದಿಂದಾಗಿ ಭಯಗೊಂಡಿದ್ದು, ಅವು ಹೊರಬರುತ್ತಿಲ್ಲ. ಆನೆಗಳನ್ನು ಕಾಡಿಗೆ ಅಟ್ಟುವ ಕಾರ್ಯವನ್ನು ಅರಣ್ಯ ಸಿಬ್ಬಂದಿಗಳು ರಾತ್ರಿಗೆ ಮುಂದೂಡಿದ್ದು, ರಾತ್ರಿ ಜನಜಂಗುಳಿ ಕಡಿಮೆಯಾದ ನಂತರ ಆನೆಗಳನ್ನು ಹೊರ ಬರುವಂತೆ ಮಾಡಿ ಅನಂತರ ಅವುಗಳನ್ನು ಕಾಡಿಗೆ ಅಟ್ಟಲಾಗುತ್ತದೆ. ಅಲ್ಲಿಯವರೆಗೂ ಅರಣ್ಯ ಸಿಬ್ಬಂದಿಗಳು ಆನೆಗಳ ಕಾವಲು ಕಾಯುವ ಕಾರ್ಯ ಮಾಡಲಿದ್ದಾರೆ.
ಅರಣ್ಯ ಸಿಬ್ಬಂದಿಗಳು ಆನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಕ್ಕೆ ತಮಿಳುನಾಡು ಅರಣ್ಯ ಸಿಬ್ಬಂದಿಗಳ ನೆರವು ಕೋರಿದ್ದು, ಸುಮಾರು 25 ಮಂದಿ ಸಿಬ್ಬಂದಿಗಳು ಈಗಾಗಲೇ ಸ್ಥಳಕ್ಕಾಗಿಮಿಸಿದ್ದಾರೆ. ತಮಿಳುನಾಡು ಸಿಬ್ಬಂದಿ ಸೇರಿದಂತೆ ಸುಮಾರು 75 ರಿಂದ 80 ಮಂದಿ ಅರಣ್ಯ ಸಿಬ್ಬಂದಿ ಕಾಡಾನೆಗಳ ಕಾರ್ಯಾಚರಣೆಗೆ ಇಳಿದಿದ್ದಾರೆ. ಒಟ್ಟು ನಾಲ್ಕು ತಂಡಗಳಲ್ಲಿ ಈ ಸಿಬ್ಬಂದಿ ಕಾರ್ಯಾಚರಣೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಂದು ರಾತ್ರಿ ಆನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ನಡೆಯಲಿದ್ದು, ಸಮೀಪದ ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಅಥವಾ ತಮಿಳುನಾಡಿನ ಕುಪ್ಪಂ ಸಮೀಪದಲ್ಲಿರುವ ಕಾಡಿಗೆ ಆನೆಗಳನ್ನು ಓಡಿಸುವ ಸಾಧ್ಯತೆ ಇದೆ.