ಚೀನಾ ಭೇಟಿ ಫಲಪ್ರದವಾಗಿದೆ: ಖುರ್ಷೀದ್
ಚೀನಾ ಪ್ರವಾಸದಿಂದ ಭಾರತಕ್ಕೆ ವಾಪಸಾಗಿರುವ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷೀದ್ ಅವರು, ಭೇಟಿ ಫಲಪ್ರದವಾಗಿದೆ...
ನವದೆಹಲಿ: ಚೀನಾ ಪ್ರವಾಸದಿಂದ ಭಾರತಕ್ಕೆ ವಾಪಸಾಗಿರುವ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷೀದ್ ಅವರು, ಭೇಟಿ ಫಲಪ್ರದವಾಗಿದೆ ಎಂದು ಹೇಳಿದ್ದಾರೆ.
ಚೀನಾ ಪ್ರವಾಸದಿಂದ ವಾಪಸಾದ ನಂತರ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸಲ್ಮಾನ್ ಖುರ್ಷೀದ್ ಅವರು, ಚೀನಾ ಭೇಟಿ ಫಲಪ್ರದವಾಗಿದ್ದು, ಎರಡು ಮೂರು ತಿಂಗಳಲ್ಲಿ ಉಭಯ ದೇಶಗಳ ನಡುವಿನ ಗಡಿ ವಿವಾದ ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
'ಚೀನಾ ಪ್ರವಾಸ ಯಶಸ್ವಿಯಾಗಿದ್ದು, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಮಾತುಕತೆಗೆ ಚಾಲನೆ ದೊರೆತಿದೆ. ಗಡಿ ವಿವಾದ ಕುರಿತಂತೆ ಇಂಡೋ ಚೀನಾ ದೇಶಗಳ ನಡುವಿನ ವಿವಾದ ಎರಡು ಮೂರು ತಿಂಗಳಲ್ಲಿ ಬಗೆಹರೆಯಲಿದೆ. ಅಂತೆಯೇ ಗಡಿಯಲ್ಲಿರುವ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಚೀನಾ ದೇಶ ನಿರ್ಮಿಸುತ್ತಿರುವ ಅಣೆಕಟ್ಟಿನ ಕುರಿತು ಮತ್ತು ನದಿ ನೀರು ಹಂಚಿಕೆಯ ಕುರಿತು ಕೂಡ ಚರ್ಚೆ ನಡೆಸಿದ್ದೇವೆ. ಈ ಬಗ್ಗೆ ಚೀನಾ ಸಕಾರಾತ್ಮಕವಾಗಿ ಸ್ಪಂದಿಸಿದೆ. ಅಲ್ಲದೆ ಉಭಯ ದೇಶಗಳ ಬಾಂಧವ್ಯ ವೃದ್ಧಿಯ ಕುರಿತು ಚರ್ಚಿಸಿರುವುದಾಗಿ ಖುರ್ಷೀದ್ ಹೇಳಿದರು.
ಗಡಿ ಅತಿಕ್ರಮಣ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ದೇಶಗಳ ನಡುವಿನ ಸಂಬಂಧ ಕೊಂಚ ಹಳಸಿತ್ತು. ಅಲ್ಲದೆ ವಿದೇಶಾಂಗ ಸಚಿವರ ಚೀನಾ ಭೇಟಿಗೆ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಆದರೆ ಗಡಿಯಲ್ಲಿ ಚೀನಾ ತನ್ನ ಯೋಧರನ್ನು ವಾಪಸ್ ಕರೆಸಿಕೊಂಡ ನಂತರ ಖುರ್ಷೀದ್ ಅವರು ಚೀನಾ ಪ್ರವಾಸ ಕೈಗೊಂಡಿದ್ದರು.