ಸಿಬಲ್ಗೆ ಕಾನೂನು, ಜೋಷಿಗೆ ರೇಲ್ವೆ ಖಾತೆ
ಕಾನೂನು ಮತ್ತು ರೇಲ್ವೆ ಸಚಿವರ ರಾಜಿನಾಮೆಯಿಂದ ತೆರವಾಗಿರುವ ಸ್ಥಾನಗಳಿಗೆ ಕಪಿಲ್ ಸಿಬಲ್ ಮತ್ತು ಸಿ.ಪಿ ಜೋಷಿ ಅವರನ್ನು ನೇಮಿಸಲಾಗಿದೆ.
ನವದೆಹಲಿ: ಕಾನೂನು ಮತ್ತು ರೇಲ್ವೆ ಸಚಿವರ ರಾಜಿನಾಮೆಯಿಂದ ತೆರವಾಗಿರುವ ಸ್ಥಾನಗಳಿಗೆ ತಾತ್ಕಾಲಿಕವಾಗಿ ಕೇಂದ್ರ ಸಚಿವರಾದ ಕಪಿಲ್ ಸಿಬಲ್ ಮತ್ತು ಸಿ.ಪಿ ಜೋಷಿ ಅವರನ್ನು ಶನಿವಾರ ನೇಮಿಸಲಾಗಿದೆ.
ಸಿಬಿಐ ವರದಿ ತಿದ್ದುಪಡಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಕಾನೂನು ಸಚಿವ ಅಶ್ವನಿ ಕುಮಾರ್ ಅವರು ಮತ್ತು ಬಡ್ತಿಗಾಗಿ ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ರೇಲ್ವೆ ಸಚಿವ ಪಿ.ಕೆ ಬನ್ಸಾಲ್ ಅವರು ನಿನ್ನೆ ತಮ್ಮ ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಿದ್ದರು. ಇದೀಗ ತೆರವುಗೊಂಡಿರುವ ಸ್ಥಾನಗಳನ್ನು ಭರ್ತಿ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರ, ಮುಂದಿನವಾರ ಸಂಪುಟ ಪುನಾರ್ರಚನೆ ಮಾಡಲು ಮುಂದಾಗಿದೆ. ಆದರೆ ಅಲ್ಲಿಯವರೆಗೆ ಈ ಎರಡು ಖಾತೆಗಳ ಹೊಣೆಗಾರಿಕೆಯನ್ನು ಕಪಿಲ್ ಸಿಬಲ್ ಮತ್ತು ಸಿ.ಪಿ. ಜೋಷಿ ಅವರಿಗೆ ನೀಡಲಾಗಿದೆ. ಕಪಿಲ್ ಸಿಬಲ್ ಅವರಿಗೆ ಈಗಿರುವ ಮಾಹಿತಿ ಮತ್ತು ತಂತ್ರಜ್ಞಾನ ಖಾತೆಯೊಂದಿಗೆ ಕಾನೂನು ಖಾತೆಯನ್ನು ಹೆಚ್ಚುವರಿಯಾಗಿ ವಹಿಸುವ ಕುರಿತು ಮಾಹಿತಿ ಲಭ್ಯವಾಗಿದ್ದು, ಅಂತೆಯೇ ಸಿ.ಪಿ.ಜೋಷಿ ಅವರಿಗೂ ಸಹ ಈಗಿರುವ ರಸ್ತೆ ಮತ್ತು ಸಾರಿಗೆ ಖಾತೆಯೊಂದಿಗೆ ರೇಲ್ವೆ ಖಾತೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.
ಅಲ್ಲದೆ ಈ ಕುರಿತು ಈಗಾಗಲೇ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಪ್ರಧಾನಿ ಪತ್ರ ಬರೆದಿದ್ದು, ಖಾತೆಗಳ ಹೆಚ್ಚುವರಿ ಹೊಣೆಗಾರಿಕೆ ಬಗ್ಗೆ ಶಿಫಾರಸು ಮಾಡಿದ್ದಾರೆ. ಕಳೆದ ವರ್ಷ ತೃಣಮೂಲ ಕಾಂಗ್ರೆಸ್ ಯುಪಿಎ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದಾಗ ಇದೇ ಸಿಪಿ ಜೋಷಿ ಅವರು ತಾತ್ಕಾಲಿಕವಾಗಿ ರೇಲ್ವೆ ಖಾತೆಯನ್ನು ನಿಭಾಯಿಸಿದ್ದರು. ಇದೀಗ ಮತ್ತೊಮ್ಮೆ ರೇಲ್ವೆ ಖಾತೆ ತಾತ್ಕಾಲಿಕ ಹೊಣೆಗಾರಿಕೆ ಅವರ ಹೆಗಲೇರಿದೆ.
ಆದರೆ ಕರ್ನಾಟಕದ ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ್ದ ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಯಾವ ಖಾತೆ ನೀಡಲಾಗುತ್ತದೆ ಎಂಬುದು ನಿಗೂಢವಾಗಿದೆ. ಮುಂದಿನ ವಾರವೇ ಕೇಂದ್ರ ಸಚಿವ ಸಂಪುಟ ಪುನಾರ್ರಚನೆ ಮಾಡಲು ಪ್ರಧಾನಿ ಮನಮೋಹನ್ ಸಿಂಗ್ ಅವರು ಉತ್ಸುಕರಾಗಿದ್ದು, ಯಾರಿಗೆ ಯಾವ ಖಾತೆ ಎಂಬುದು ಮುಂದಿನವಾರವೇ ಸ್ಪಷ್ಟವಾಗಲಿದೆ.