ನವಾಜ್ ಶರೀಫ್ ಭಾರತ ಭೇಟಿಗೆ ಪ್ರಧಾನಿ ಸಿಂಗ್ ಆಹ್ವಾನ
ಪಾಕಿಸ್ತಾನ ಮಾಜಿ ನವಾಜ್ ಶರೀಫ್ ಅವರಿಗೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದಾರೆ.
ನವದೆಹಲಿ: ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯಲ್ಲಿ ಅಭೂತಪೂರ್ವ ಜಯ ದಾಖಲಿಸಿರುವ ಪಾಕಿಸ್ತಾನ ಮುಸ್ಲಿಂ ಲೀಗ್ ಅಧ್ಯಕ್ಷ ನವಾಜ್ ಶರೀಫ್ ಅವರಿಗೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದಾರೆ.
ಚುನಾವಣೆಯಲ್ಲಿ ಅಭೂತಪೂರ್ವ ಜಯಗಳಿಸಿರುವ ನವಾಜ್ ಶರೀಫ್ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದ್ದು, ಭಾರತ ಪ್ರಧಾನಿ ಮನಮೋಹನ್ ಸಿಂಗ್ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೆ ಭಾರತಕ್ಕೆ ಒಮ್ಮೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದಾರೆ.
ಪಾಕಿಸ್ತಾನದಲ್ಲಿ ನಿನ್ನೆ ನಡೆದಿದ್ದ ಚುನಾವಣೆಯ ಮತಎಣಿಕೆ ಕಾರ್ಯ ಇಂದು ಮುಂದುವರೆದಿದ್ದು, ನವಾಜ್ ಶರೀಫ್ ಅವರ ಪಿಎಂಎಲ್-ಎನ್ ಪಕ್ಷ ಈಗಾಗಲೇ 125 ಕ್ಷೇತ್ರಗಳಲ್ಲಿ ಜಯಗಳಿಸುವ ಮೂಲಕ ಪಿಎಂಎಲ್-ಎನ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುವತ್ತ ಹೆಜ್ಜೆ ಹಾಕಿದೆ. ಒಟ್ಟು 272 ಸ್ಥಾನಗಳ ಪೈಕಿ 264 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಅದರಲ್ಲಿ ನವಾಜ್ ಶರೀಫ್ ಅವರ ಪಿಎಂಎಲ್-ಎನ್ ಪಕ್ಷ 125 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಸರ್ಕಾರ ರಚನೆಗೆ 137 ಮ್ಯಾಜಿಕ್ ನಂಬರ್ ಆಗಿದ್ದು, ಪಿಎಂಎಲ್-ಎನ್ ಪಕ್ಷಕ್ಕೆ ಇನ್ನು ಕೇವಲ 12 ಸ್ಥಾನಗಳ ಅವಶ್ಯಕತೆ ಇದೆ. ಪಿಎಂಎಲ್-ಎನ್ ಪಕ್ಷ ಇದಕ್ಕಾಗಿ ಇತರೆ ಪಕ್ಷಗಳತ್ತ ಚಿತ್ತ ಹರಿಸಿದೆ.
ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಅವರ ತೆಹ್ರೀಕ್-ಇ-ಇನ್ಸಾಫ್ ಪಕ್ಷ 34 ಸ್ಥಾನಗಳನ್ನು ಪಡೆದುಕೊಂಡಿದ್ದು, ಆಡಳಿತಾರೂಢ ಪಾಕಿಸ್ತಾನ ಪೀಪಲ್ಸ್ ಪಾರ್ಟಿ 32 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಆ ಮೂಲಕ ಎರಡನೇ ವಿರೋಧ ಪಕ್ಷ ಸ್ಥಾನಕ್ಕೆ ಪಿಪಿಪಿ ಪಕ್ಷ ತಳ್ಳಲ್ಪಟ್ಟಿದೆ. ಉಗ್ರರ ದಾಳಿ ಮತ್ತು ಪ್ರತಿಭಟನಾಕಾರರ ವಿರೋಧಗಳ ನಡುವೆಯೂ ನಿನ್ನೆ ಪಾಕಿಸ್ತಾನದಾದ್ಯಂತ ನಡೆದಿದ್ದ ಚುನಾವಣೆಯಲ್ಲಿ ಲಕ್ಷಾಂತರ ಮಂದಿ ಬಿರುಸಿನಿಂದ ಮತದಾನ ಮಾಡಿದ್ದರು. ಮತದಾನದ ನಡುವೆಯೇ ಅಲ್ಲಲ್ಲಿ ಬಾಂಬ್ ಸ್ಫೋಟ ಮತ್ತು ಉಗ್ರರ ದಾಳಿಗಳಿಗೆ ತಲೆಕೆಡಿಸಿಕೊಳ್ಳದ ಪಾಕಿಸ್ತಾನ ಜನತೆ ಭಾರಿ ಸಂಖ್ಯೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.