ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಪಾಕಿಸ್ತಾನ ಪ್ರಧಾನಿಯಾಗಿ ನವಾಜ್ ಶರೀಫ್?

ಪಾಕಿಸ್ತಾನ ಪ್ರಧಾನಿಯಾಗಿ ಪಿಎಂಎಲ್ ಎನ್ ಪಕ್ಷದ ಮುಖಂಡ ನವಾಜ್ ಶರೀಫ್ ಅವರು ಆಯ್ಕೆಯಾಗುವ ಸಾಧ್ಯತೆಗಳಿವೆ.

Srinivasa Murthy VN
Updated On : 12 May 2013, 2:52 am

ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿಯಾಗಿ ಪಿಎಂಎಲ್ ಎನ್ ಪಕ್ಷದ ಮುಖಂಡ ನವಾಜ್ ಶರೀಫ್ ಅವರು ಆಯ್ಕೆಯಾಗುವ ಸಾಧ್ಯತೆಗಳಿವೆ.

ಶನಿವಾರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ನವಾಜ್ ಶರೀಫ್ ಅವರ ಪಿಎಂಎಲ್-ಎನ್ ಪಕ್ಷ ಬಾರಿ ಮುನ್ನಡೆ ಕಾಯ್ದುಕೊಂಡಿದ್ದು, ಪಾಕಿಸ್ತಾನದ ಪ್ರಧಾನಿಯಾಗಿ ನವಾಜ್ ಶರೀಫ್ ಅವರು ಮೂರನೇ ಬಾರಿ ಅಧಿಕಾರದ ಗದ್ದುಗೆ ಏರುವುದು ಬಹುತೇಕ ಖಚಿತವಾಗಿದೆ. ಒಟ್ಟು 272 ಸ್ಥಾನಗಳ ಪೈಕಿ 264 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಅದರಲ್ಲಿ ನವಾಜ್ ಶರೀಫ್ ಅವರ ಪಿಎಂಎಲ್-ಎನ್ ಪಕ್ಷ 125 ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

ಪಾಕಿಸ್ತಾನದಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಅವರ ತೆಹ್ರೀಕ್-ಇ-ಇನ್ಸಾಫ್ ಪಕ್ಷ 34 ಸ್ಥಾನಗಳನ್ನು ಪಡೆದುಕೊಂಡಿದ್ದು, ಆಡಳಿತಾರೂಢ ಪಾಕಿಸ್ತಾನ ಪೀಪಲ್ಸ್ ಪಾರ್ಟಿ 32 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಆ ಮೂಲಕ ಎರಡನೇ ವಿರೋಧ ಪಕ್ಷ ಸ್ಥಾನಕ್ಕೆ ಪಿಪಿಪಿ ಪಕ್ಷ ತಳ್ಳಲ್ಪಟ್ಟಿದೆ.

ಉಗ್ರರ ದಾಳಿ ಮತ್ತು ಪ್ರತಿಭಟನಾಕಾರರ ವಿರೋಧಗಳ ನಡುವೆಯೂ ನಿನ್ನೆ ಪಾಕಿಸ್ತಾನದಾದ್ಯಂತ ನಡೆದಿದ್ದ ಚುನಾವಣೆಯಲ್ಲಿ ಲಕ್ಷಾಂತರ ಮಂದಿ ಬಿರುಸಿನಿಂದ ಮತದಾನ ಮಾಡಿದ್ದರು. ಮತದಾನದ ನಡುವೆಯೇ ಅಲ್ಲಲ್ಲಿ ಬಾಂಬ್ ಸ್ಫೋಟ ಮತ್ತು ಉಗ್ರರ ದಾಳಿಗಳಿಗೆ ತಲೆಕೆಡಿಸಿಕೊಳ್ಳದ ಪಾಕಿಸ್ತಾನ ಜನತೆ ಭಾರಿ ಸಂಖ್ಯೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ನಿನ್ನೆ ರಾತ್ರಿಯೇ ಆರಂಭಗೊಂಡಿದ್ದ ಮತಎಣಿಕೆ ಕಾರ್ಯ ಇನ್ನೂ ಮುಂದುವರೆದಿದ್ದು, ಅದಾಗಲೇ ನವಾಜ್ ಶರೀಫ್ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಬಹುಮತಕ್ಕೆ ನವಾಜ್ ಶರೀಫ್ ಅವರ ಪಿಎಂಎಲ್-ಎನ್ ಪಕ್ಷಕ್ಕೆ ಇನ್ನೂ 12 ಸ್ಥಾನಗಳ ಅವಶ್ಯಕತೆ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement