'ಸಿದ್ದು' ಪ್ರಮಾಣ: ಕ್ರೀಡಾಂಗಣದತ್ತ ಜನಸಾಗರ
ಸಿದ್ದರಾಮಯ್ಯ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಜನಸಾಗರವೇ ಹರಿದು ಬರುತ್ತಿದೆ.
ಬೆಂಗಳೂರು: ಸಿದ್ದರಾಮಯ್ಯ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಜನಸಾಗರವೇ ಹರಿದು ಬರುತ್ತಿದೆ.
ಸಮಾರಂಭ ಆಯೋಜನೆಗೊಂಡಿರುವ ಕಂಠೀರವ ಕ್ರೀಡಾಂಗಣದ ಸುತ್ತಮುತ್ತ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದ್ದು, ಕಸ್ತೂರಬಾ ರಸ್ತೆ, ವಿಠಲ ಮಲ್ಯ ರಸ್ತೆಯ ಸುತ್ತಮುತ್ತ ಟ್ರಾಫಿಕ್ ಜಾಮ್ ಉಂಟಾಗಿದೆ. ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಸಿದ್ದರಾಮಯ್ಯ ಅವರ ಬೆಂಬಲಿಗರು ಮತ್ತು ಸಹಸ್ರಾರು ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರಿಂದಾಗಿ ಕ್ರೀಡಾಂಗಣದ ಆವರಣದಲ್ಲಿ ಜಾತ್ರೆಯ ಸಂಭ್ರಮವನ್ನು ನೆನಪಿಸುತ್ತಿದೆ.
ಈಗಾಗಲೇ ಕಂಠೀರವ ಕ್ರೀಡಾಂಗಣದ ಆಸನಗಳು ಬಹುತೇಕ ತುಂಬಿದ್ದು, ವಿವಿಐಪಿಗಳು ಮತ್ತು ವಿರೋಧ ಪಕ್ಷದ ನಾಯಕರು, ರಾಜಕೀಯ ಧುರೀಣರು ಮತ್ತು ಸಿದ್ಧರಾಮಯ್ಯ ಆಪ್ತರು ಕ್ರೀಡಾಂಗಣಕ್ಕೆ ಆಗಮಿಸಿದ್ದಾರೆ. ಸಮಾರಂಭಕ್ಕೆ ಆಗಮಿಸಿರುವ ವಾಹನಗಳಿಗೆ ಪ್ರತ್ಯೇಕ ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಬನ್ನಪ್ಪ ಪಾರ್ಕ್, ಮಲ್ಯ ಆಸ್ಪತ್ರೆ, ಕಬ್ಬನ್ ಪಾರ್ಕ್ ಮತ್ತು ಸೆಂಟ್ರಲ್ ಲೈಬ್ರರಿ ರಸ್ತೆಯಲ್ಲಿ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡಲಾಗಿದೆ. ಕ್ರೀಡಾಂಗಣದ ಭದ್ರತೆಗೆ ಸುಮಾರು 3000 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದ್ದು, ಸಮಾರಂಭಕ್ಕೆ ಆಗಮಿಸಲಿರುವ ಜನರನ್ನು ಪೊಲೀಸರು ತೀವ್ರ ತಪಾಸಣೆಗೊಳಪಡಿಸಿದ್ದಾರೆ.
ಈಗಾಗಲೇ ನಿಯೋಜಿತ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕ್ರೀಡಾಂಗಣದತ್ತ ಆಗಮಿಸಿದ್ದು, ಬಸವ ಜಯಂತಿ ನಿಮಿತ್ತ ಬೆಂಗಳೂರಿನ ಚಾಲುಕ್ಯ ವೃತ್ತದಲ್ಲಿರುವ ಬಸವೇಶ್ವರಮೂರ್ತಿಗೆ ಮಾಲಾರ್ಪಣೆ ಮಾಡಿದ್ದು, ಅಂತೆಯೇ ಮೌರ್ಯ ವೃತ್ತದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದಾರೆ. ಅಂತೆಯೇ ವಿಧಾನಸೌಧದ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೂ ಕೂಡ ಸಿದ್ದು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಇಂದು ಬೆಳಗ್ಗೆ 11.42ಕ್ಕೆ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಪ್ರಮಾಣವಚನ ಭೋಧಿಸಿದ್ದು, ರಾಜ್ಯದ 22ನೇ ಮುಖ್ಯಮಂತ್ರಿಯಾಗಿ ಸಿದ್ದು ಅಧಿಕಾರ ವಹಿಸಿಕೊಂಡಿದ್ದಾರೆ.