ಹಸ್ತಕ್ಷೇಪ ಮುಕ್ತ ಸಿಬಿಐಗಾಗಿ ಸಚಿವರ ತಂಡ
ಸಿಬಿಐ ಮುಕ್ತವಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಲು ಕೇಂದ್ರ ಸರ್ಕಾರ ಮುಂದಾಗಿದ್ದು,..
ನವದೆಹಲಿ: ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ) ಮುಕ್ತವಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ಇದಕ್ಕಾಗಿ ಕೇಂದ್ರ ಸಚಿವರ ತಂಡವೊಂದನ್ನು ರಚಿಸಿದೆ.
ಇತ್ತೀಚೆಗೆ ಕಲ್ಲಿದ್ದಲು ಹಗರಣದ ಸಂಬಂಧ ಸಿಬಿಐ ತನಿಖೆಯಲ್ಲಿ ಹಸ್ತಕ್ಷೇಪ ಮಾಡಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಕೇಂದ್ರದ ಯುಪಿಎ ಸರ್ಕಾರ, ಸಿಬಿಐ ತನಿಖಾ ಸಂಸ್ಥೆಯ ಮೇಲೆ ಬಾಹ್ಯ ಪ್ರಭಾವಗಳನ್ನು ನಿವಾರಿಸುವುದಕ್ಕಾಗಿ ತಂಡವೊಂದನ್ನು ರಚಿಸಿದೆ. ವಿತ್ತ ಸಚಿವ ಪಿ.ಚಿದಂಬರಂ ಅವರ ನೇತೃತ್ವದಲ್ಲಿ ಈ ತಂಡವನ್ನು ರಚಿಸಲಾಗಿದ್ದು, ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್, ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಕಪಿಲ್ ಸಿಬಲ್, ಮಾಹಿತಿ ಮತ್ತು ಪ್ರಸಾರ ಖಾತೆಯ ಸಚಿವ ಮನೀಶ್ ತಿವಾರಿ ಮತ್ತು ಗೃಹ ಇಲಾಖೆಯ ರಾಜ್ಯ ಸಚಿವ ವಿ.ನಾರಾಯಣ ಸ್ವಾಮಿ ಅವರು ಈ ತಂಡದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.
ಸಿಬಿಐ ತನಿಖಾ ಸಂಸ್ಥೆಗೆ ಹೊಸ ಶಕ್ತಿಯಾಗಿ ಈ ತಂಡ ಕಾರ್ಯನಿರ್ವಹಿಸಲಿದ್ದು, ಸಂಸ್ಥೆ ಸ್ವತಂತ್ರವಾಗಿ ಕೆಲಸಮಾಡಲು ಬೇಕಾದ ಅಗತ್ಯ ಕ್ರಮಗಳನ್ನು ಈ ತಂಡ ಕೈಗೊಳ್ಳಲಿದೆ. ಕಲ್ಲಿದ್ದಲು ಹಗರಣದ ವರದಿ ತಿದ್ದುಪಡಿ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವನ್ನು ಸುಪ್ರೀಂಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಅಲ್ಲದೆ ಸಿಬಿಐ 'ಪಂಜರದೊಳಗಿನ ಗಿಣಿ'ಯೆಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ನ್ಯಾಯಾಲಯದ ಛಾಟಿ ಏಟಿನಿಂದಾಗಿ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ, ಪ್ರಧಾನಿ ಮನಮೋಹನ್ ಸಿಂಗ್ ಅವರ ಸಲಹೆಯಂತೆ ಸಿಬಿಐ ಸಂಸ್ಥೆಯನ್ನು ಬಲಪಡಿಸಲು ಕೇಂದ್ರ ಸಚಿವರ ತಂಡವನ್ನು ರಚಿಸಿದೆ.