ಬೆಟ್ಟಿಂಗ್ಗೆ ಕಾನೂನು ಮಾನ್ಯತೆ ನೀಡಬೇಕು: ಫಾರೂಕ್ ಅಬ್ದುಲ್ಲಾ
ಕ್ರಿಕೆಟ್ ಬೆಟ್ಟಿಂಗ್ಗೆ ಕಾನೂನು ಮಾನ್ಯತೆ ನೀಡಬೇಕು ಎಂದು ಕೇಂದ್ರ ಸಚಿವ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
ಶ್ರೀನಗರ: ಕ್ರಿಕೆಟ್ ಬೆಟ್ಟಿಂಗ್ಗೆ ಕಾನೂನು ಮಾನ್ಯತೆ ನೀಡಬೇಕು ಎಂದು ಕೇಂದ್ರ ಸಚಿವ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
ಗಂದರ್ಬಲ್ನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಫಾರೂಕ್ ಅಬ್ದುಲ್ಲಾ ಅವರು, ವಿಶ್ವದ ಹಲವು ಭಾಗಗಳಲ್ಲಿ ಬೆಟ್ಟಿಂಗ್ಗೆ ಕಾನೂನು ಮಾನ್ಯತೆ ಇದ್ದು, ಭಾರತದಲ್ಲಿಯೂ ಅದಕ್ಕೆ ಕಾನೂನು ಮಾನ್ಯತೆ ನೀಡಬೇಕು. ಇದರಿಂದ ಸ್ಪಾಟ್ ಫಿಕ್ಸಿಂಗ್ನಂತಹ ಸಮಾಜ ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಬೀಳುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೆ ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ಅವರ ಬೆಂಬಲಕ್ಕೆ ನಿಂತ ಅವರು, ಶ್ರೀನಿವಾಸನ್ ಅವರ ರಾಜಿನಾಮೆಗೆ ಆಗ್ರಹಿಸುತ್ತಿರುವುದು ಸರಿಯಲ್ಲ ಎಂದರು. ಶ್ರೀನಿವಾಸನ್ ಅವರ ಅಳಿಯ ಗುರುನಾಥ್ ಮೇಯಪ್ಪನ್ ಪ್ರಕರಣದಲ್ಲಿ ಭಾಗಿಯಾದರೆ ಶ್ರೀನಿವಾಸನ್ ಏಕೆ ರಾಜಿನಾಮೆ ನೀಡಬೇಕು ಎಂದು ಫಾರೂಕ್ ಅಬ್ದುಲ್ಲಾ ಪ್ರಶ್ನಿಸಿದರು. ತಮಗೂ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಶ್ರೀನಿವಾಸನ್ ಹೇಳಿದ್ದಾರೆ. ನಾಳೆ ನನ್ನ ಅಳಿಯನೂ ಯಾವುದಾದರೂ ಪ್ರಕರಣದಲ್ಲಿ ಪಾಲ್ಗೊಂಡು ಸಿಕ್ಕಿಬಿದ್ದರೆ ನಾನೇಕೆ ಅದರ ಹೊಣೆ ಹೊರಲಿ? ಎಂದು ಅಬ್ದುಲ್ಲಾ ಹೇಳಿದರು.
ಒಟ್ಟಾರೆ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದು, ಬಿಸಿಸಿಐ ಆಡಳಿತ ಮಂಡಳಿಯ ಸದಸ್ಯರು ಕೂಡ ಆಗಿರುವ ಫಾರೂಕ್ ಅಬ್ದುಲ್ಲಾ ಅವರ ಈ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.