ಸ್ಪಾಟ್ ಫಿಕ್ಸಿಂಗ್: ತನಿಖೆಗೆ ಶಾಸ್ತ್ರಿ ನೇತೃತ್ವ?
ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಮಾಜಿ ಕ್ರಿಕೆಟಿಗ ರವಿ ಶಾಸ್ತ್ರಿ ಅವರ ನೇತೃತ್ವದಲ್ಲಿ ..
ನವದೆಹಲಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಮುಂದಾಗಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಸಂಸ್ಥೆ (ಬಿಸಿಸಿಐ), ಇದಕ್ಕಾಗಿ ಮಾಜಿ ಕ್ರಿಕೆಟ್ ಆಟಗಾರ ರವಿ ಶಾಸ್ತ್ರಿ ಅವರ ನೇತೃತ್ವದಲ್ಲಿ ತಂಡ ರಚಿಸಲು ಚಿಂತಿಸಿದೆ.
ಐಪಿಎಲ್‌ನಲ್ಲಿ ನಡೆದಿದೆ ಎನ್ನಲಾಗುತ್ತಿರುವ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ತನಿಖೆಗಾಗಿ ಮೂವರು ಸದಸ್ಯರ ತಂಡವನ್ನು ರಚಿಸಲಾಗಿದ್ದು, ತಂಡದ ನೇತೃತ್ವವನ್ನು ರವಿ ಶಾಸ್ತ್ರಿ ಅವರು ವಹಿಸಿಕೊಳ್ಳಲಿದ್ದಾರೆ. ಅಲ್ಲದೆ ಈ ತಂಡದಲ್ಲಿ ಬಿಸಿಸಿಐನ ಖಜಾಂಚಿಯಾಗಿರುವ ಅಜಯ್ ಶಿರ್ಕೆ ಮತ್ತು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರೋರ್ವರನ್ನು ನೇಮಿಸಲಾಗಿದೆ. ಈ ಮೂವರು ಸದಸ್ಯರ ನೇತೃತ್ವದಲ್ಲಿ ತನಿಖೆ ನಡೆಯಲ್ಲಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಖ್ಯ ಕಾರ್ಯನಿರ್ವಾಹಕ ಗುರುನಾಥ್ ಮೇಯಪ್ಪನ್ ಅವರ ವಿಚಾರಣೆಯನ್ನು ಕೂಡ ಇದೇ ತಂಡ ನಡೆಸಲಿದೆ ಎಂದು ತಿಳಿದು ಬಂದಿದೆ.
ರವಿ ಶಾಸ್ತ್ರಿ ಮತ್ತು ಬಿಸಿಸಿಐ ಖಜಾಂಚಿ ಅಜಯ್ ಶಿರ್ಕೆ ಅವರು ಸ್ವತಃ ಐಪಿಎಲ್ ಆಡಳಿತ ಮಂಡಳಿಯ ಸದಸ್ಯರಾಗಿದ್ದು, ಬಿಸಿಸಿಐ ಉಪಾಧ್ಯಕ್ಷರಾಗಿರುವ ಅರುಣ್ ಜೇಟ್ಲಿ, ಐಪಿಎಲ್ ಚೇರ್ಮನ್ ರಾಜೀವ್ ಶುಕ್ಲಾ ಅವರು ಮತ್ತು ಬಿಸಿಸಿಐ ಪ್ರಧಾನ ಕಾರ್ಯದರ್ಶಿ ಸಂಜಯ್ ಜಗದಾಳೆ ಅವರು ಸಮಿತಿ ಸದಸ್ಯರಿಗೆ ಬಾಹ್ಯ ಬೆಂಬಲ ನೀಡಲಿದ್ದಾರೆ.
ಗುರುನಾಥನ್ ಮೇಯಪ್ಪನ್ ಅವರು ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ಅವರ ಸೋದರ ಅಳಿಯರಾಗಿದ್ದು, ಪ್ರಕರಣದಲ್ಲಿ ಶ್ರೀನಿವಾಸನ್ ಅವರ ಹೆಸರೂ ಕೂಡ ಬಲವಾಗಿ ಕೇಳಿಬರುತ್ತಿವೆ. ಹೀಗಾಗಿ ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ಅವರ ರಾಜಿನಾಮೆಗೆ ಒತ್ತಡ ಹೆಚ್ಚಾಗಿದೆ. ಆದರೆ ಪ್ರಕರಣದ ಕುರಿತು ಸ್ಪಷ್ಟನೆ ನೀಡಿರುವ ಶ್ರೀನಿವಾಸನ್, ತಮಗೂ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಅಲ್ಲದೆ ತಾವೂ ಯಾವುದೇ ಫಿಕ್ಸಿಂಗ್ ಪ್ರಕರಣದಲ್ಲಿ ಪಾಲ್ಗೊಂಡಿಲ್ಲ ಎಂದು ಹೇಳಿದ್ದಾರೆ.