ಡೆಂಘೀ: ತುರ್ತು ಚಿಕಿತ್ಸಾ ಕೇಂದ್ರ ಸ್ಥಾಪನೆಗೆ ಸಚಿವರ ಸೂಚನೆ
ಡೆಂಘೀ ಜ್ವರದ ನಿಯಂತ್ರಣಕ್ಕಾಗಿ ತುರ್ತು ಚಿಕಿತ್ಸಾ ಕೇಂದ್ರ ತೆರೆಯುವಂತೆ ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಸೂಚನೆ ನೀಡಿದ್ದಾರೆ.
ಬೆಂಗಳೂರು: ರಾಜ್ಯಾದ್ಯಂತ ಮತ್ತೆ ಉಲ್ಬಣಿಸಿರುವ ಡೆಂಘೀ ಜ್ವರದ ನಿಯಂತ್ರಣಕ್ಕಾಗಿ ರಾಜ್ಯಾದ್ಯಂತ ತುರ್ತು ಚಿಕಿತ್ಸಾ ಕೇಂದ್ರಗಳನ್ನು ತೆರೆಯುವಂತೆ ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಸೂಚನೆ ನೀಡಿದ್ದಾರೆ.
ಇಂದು ಸಂಜೆ ಬೆಂಗಳೂರಿನ ವಿಕಾಸಸೌಧದಲ್ಲಿ ನಡೆದ ಜಿಲ್ಲಾ ಆರೋಗ್ಯಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡಿದ್ದ ಸಚಿವ ಯು.ಟಿ.ಖಾದರ್ ಅವರು, ತುರ್ತು ಕ್ರಮ ಕೈಗೊಳ್ಳುವಂತೆ ಮತ್ತು ಡೆಂಘೀ ಕುರಿತು ಪ್ರತಿ ವಾರ ಮಾಹಿತಿ ಕ್ರೋಢೀಕರಣ ಸಭೆ ನಡೆಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ ಡೆಂಘೀ ಬಾಧಿತ ರೋಗಿಗಳಿಗೆ ಅಗತ್ಯ ಔಷಧೋಪಚಾರ ನಡೆಸುವಂತೆಯೂ ಮತ್ತು ತುರ್ತು ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪನೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಹಾವೇರಿಯ ಶಿಗ್ಗಾವಿ ಮತ್ತು ಮೈಸೂರಿನ ಸಾಲುಂಡಿ ಗ್ರಾಮದಲ್ಲಿ ಮರಣ ಮೃದಂಗ ಬಾರಿಸಿದ್ದ ಡೆಂಘೀ ಜ್ವರ, 7 ಮಂದಿ ರೋಗಿಗಳ ಸಾವಿಗೆ ಕಾರಣವಾಗಿತ್ತು. ಕ್ರಮೇಣ ರಾಜ್ಯಾದ್ಯಂತ ಅತಿ ಹೆಚ್ಚು ಪ್ರಮಾಣದಲ್ಲಿ ಡೆಂಘೀ ಪ್ರಕರಣಗಳು ಪತ್ತೆಯಾಗುತ್ತಿದ್ದು, ಈ ಬಗ್ಗೆ ಗಂಭೀರ ಚಿಂತನೆಯಲ್ಲಿ ತೊಡಗಿರುವ ಸರ್ಕಾರ ಡೆಂಘೀ ಜ್ವರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಮುಂದಾಗಿದೆ.
2013ರಲ್ಲಿ ರಾಜ್ಯಾದ್ಯಂತ ಸುಮಾರು 684 ಡೆಂಘೀ ಪ್ರಕರಣಗಳು ಪತ್ತೆಯಾಗಿದ್ದವು. ಈ ಪೈಕಿ ರಾಜಧಾನಿ ಬೆಂಗಳೂರಿನಲ್ಲಿಯೇ 84 ಡೆಂಘೀ ಪ್ರಕರಣ ಪತ್ತೆಯಾಗಿತ್ತು. ಅಲ್ಲದೆ ಈಜಿಪುರ ಮತ್ತು ಫ್ರೇಜರ್‌ಟೌನ್ ಪ್ರದೇಶಗಳಲ್ಲಿ 4 ಮಂದಿ ಸಾವಿಗೀಡಾಗಿದ್ದರು. ಇತ್ತೀಚೆಗೆ ಸಾಲುಂಡಿ ಗ್ರಾಮದಲ್ಲಿಯೂ ಸಹ ಇಬ್ಬರು ರೋಗಿಗಳು ಡೆಂಘೀ ಜ್ವರದಿಂದಾಗಿ ಸಾವನ್ನಪ್ಪಿದ್ದರು. ಅಂತೆಯೇ ಹಾವೇರಿಯಲ್ಲಿ 39, ಶಿವಮೊಗ್ಗದಲ್ಲಿ 87, ಮೈಸೂರಿನಲ್ಲಿ 63, ಬೆಳಗಾವಿಯಲ್ಲಿ 25, ದಾವಣಗೆರೆಯಲ್ಲಿ 44, ದಕ್ಷಿಣ ಕನ್ನಡದಲ್ಲಿ 32, ರಾಮನಗರದಲ್ಲಿ 25, ರಾಯಚೂರಿನಲ್ಲಿ 24, ತುಮಕೂರಿನಲ್ಲಿ 23, ಉಡುಪಿಯಲ್ಲಿ 24 ಮತ್ತು ಬೆಳಗಾವಿಯಲ್ಲಿ 25 ಶಂಕಿತ ಡೆಂಘೀ ಪ್ರಕರಣಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.