ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನಾನು ಪಾರದರ್ಶಕವಾಗಿದ್ದೇನೆ: ಅಂಪೈರ್ ಅಸದ್ ರೌಫ್

ಐಪಿಎಲ್ ಸರಣಿಯಲ್ಲಿ ಪಾರದರ್ಶಕ ತೀರ್ಪು ನೀಡಿದ್ದೇನೆ ಎಂದು ಅಂಪೈರ್ ಅಸದ್ ರೌಫ್ ಹೇಳಿದ್ದಾರೆ.

Srinivasa Murthy VN
Updated On : 29 May 2013, 4:34 am

ಲಾಹೋರ್: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾಗಿಲ್ಲ ಮತ್ತು ಸರಣಿಯಲ್ಲಿ ತಾವು ಪಾರದರ್ಶಕ ತೀರ್ಪು ನೀಡಿದ್ದೇನೆ ಎಂದು ಅಂಪೈರ್ ಅಸದ್ ರೌಫ್ ಹೇಳಿದ್ದಾರೆ.

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ತಮ್ಮ ಮೌನ ಮುರಿದಿರುವ ಪಾಕಿಸ್ತಾನ ಮೂಲದ ಅಂಪೈರ್ ಅಸದ್ ರೌಫ್ ಅವರು ಪಾಕಿಸ್ತಾನದ ಲಾಹೋರ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ' ತಮಗೂ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ನನ್ನ ವಿರುದ್ಧದ ಆರೋಪಗಳೆಲ್ಲ ಶುದ್ಧ ಸುಳ್ಳು. ಪ್ರಕರಣ ಸಂಬಂಧ ಐಸಿಸಿ ವಿಧಿಸುವ ಯಾವುದೇ ವಿಚಾರಣೆಗೂ ತಾವು ಸಿದ್ಧ ' ಎಂದು ಹೇಳಿದ್ದಾರೆ.

'ನನ್ನ ವೃತ್ತಿ ಜೀವನದಲ್ಲಿ ಎಲ್ಲ ಪಂದ್ಯಗಳಲ್ಲಿಯೂ ನಾನು ಪಾರದರ್ಶಕವಾಗಿ ತೀರ್ಪು ನೀಡಿದ್ದೇನೆ. ನನ್ನ ವಿರುದ್ಧ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಎಲ್ಲ ವರದಿಗಳು ಸತ್ಯಕ್ಕೆ ದೂರವಾದಂತಹವು. ನನಗೆ ಯಾವ ಬುಕ್ಕಿಯ ಪರಿಚಯವಿಲ್ಲ. ಐಪಿಎಲ್ ಪಂದ್ಯಗಳಲ್ಲಿ ಅಕ್ರಮ ಎಸಗಿಲ್ಲ' ಎಂದು ಅಸದ್ ರೌಫ್ ಹೇಳಿದರು.

ಆದರೆ ಪ್ರಕರಣ ಬಯಲಾದಾಗಿನಿಂದಲೂ ಇಲ್ಲಿಯವರೆಗೂ ತಾವು ಮೌನವಹಿಸಿದ್ದೇಕೆ..? ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, 'ನಾನು ಐಸಿಸಿಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ವೃತ್ತಿ ಸಂಬಂಧ ಐಸಿಸಿಯನ್ನು ಸಂಪರ್ಕಿಸದೇ ನಾನು ಯಾವುದೇ ತೀರ್ಮಾನ ಕೈಗೊಳ್ಳುವಂತಿಲ್ಲ. ಅಲ್ಲದೆ ಐಸಿಸಿ ಕೂಡ ಪ್ರಕರಣ ಸಂಬಂಧ ಮಾಧ್ಯಮಗಳಿಗೆ ಹೇಳಿಕೆ ನೀಡಬಾರದೆಂದು ಸೂಚಿಸಿತ್ತು. ಹೀಗಾಗಿ ನಾನು ಮೌನಕ್ಕೆ ಶರಣಾಗಿದ್ದೆ' ಎಂದು ರೌಫ್ ಹೇಳಿದರು.

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಪಾಕಿಸ್ತಾನದ ಮೂಲದ ಅಂಪೈರ್ ಅಸದ್ ರೌಫ್ ಅವರ ಹೆಸರು ಕೂಡ ಬಲವಾಗಿ ಕೇಳಿಬಂದಿತ್ತು. ಇದಕ್ಕೆ ಪೂರಕವೆಂಬಂತೆ ಅಸದ್ ರೌಫ್ ಅವರು ಕೆಲ ಯುವತಿಯರೊಂದಿಗೆ ಇರುವ ಛಾಯಾಚಿತ್ರಗಳು ಇಂಟರ್ನೆಟ್ ನಲ್ಲಿ ಹರಿದಾಡಿದ್ದವು. ರೌಫ್ ಅವರೊಂದಿಗೆ ಇದ್ದ ಯುವತಿಯರನ್ನು ಬುಕ್ಕಿಗಳೇ ಕಳುಹಿಸಿಕೊಟ್ಟಿರುವ ಕುರಿತು ವರದಿಗಳು ಪ್ರಸಾರವಾಗಿದ್ದವು. ಈ ಹಿನ್ನಲೆಯಲ್ಲಿ ಅಸದ್ ರೌಫ್ ಅವರ ವಿರುದ್ದವೂ ಕೂಡ ತನಿಖೆ ನಡೆಯುವ ಸಾಧ್ಯತೆ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement