ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಲಾಡೆನ್ ಆತ್ಮಹತ್ಯೆ ಮಾಡಿಕೊಂಡಿದ್ದ: ಉಗ್ರ ನಾಯಕ ಅಬ್ದುಲ್ ಫತ್ಹಾ

ಒಸಾಮಾ ಬಿನ್ ಲಾಡೆನ್ ತನ್ನನ್ನು ತಾನೇ ಸ್ಫೋಟಿಸಿಕೊಂಡು ಸಾವಿಗೀಡಾಗಿದ್ದ ಎಂದು ಆತನ ಅಂಗ ರಕ್ಷಕ ಅಬ್ದುಲ್...

Srinivasa Murthy VN
Updated On : 29 May 2013, 6:24 am

ಇಸ್ಲಾಮಾಬಾದ್: ಅಲ್‌ಖೈದಾ ನಾಯಕ ಒಸಾಮಾ ಬಿನ್ ಲಾಡೆನ್ ತನ್ನನ್ನು ತಾನೇ ಸ್ಫೋಟಿಸಿಕೊಂಡು ಸಾವಿಗೀಡಾಗಿದ್ದ ಎಂದು ಉಗ್ರ ನಾಯಕ ಮತ್ತು ಬಿನ್ ಲಾಡೆನ್ ಮಾಜಿ ಅಂಗ ರಕ್ಷಕ ನಬೀಲ್ ನಯೀಮ್ ಅಬ್ದುಲ್ ಫತ್ಹಾ ಹೇಳಿದ್ದಾನೆ.

ಅಲ್ ಖೈದಾ ನಾಯಕ ಬಿನ್ ಲಾಡೆನ್ ಸಾವಿನ ಕುರಿತು ಎದ್ದಿರುವ ವಿವಾದ ಕುರಿತಂತೆ ಪಾಕಿಸ್ತಾನದ ಅಜ್ಞಾತ ಸ್ಥಳದಿಂದ ಮಾಧ್ಯಮಗಳೊಂದಿಗೆ ಮಾತನಾಡಿರುವ ಅಬ್ದುಲ್ ಫತ್ಹಾ, 'ಬಿನ್ ಲಾಡೆನ್ ಸಾವಿನ ಕುರಿತು ಅಮೇರಿಕಾ ಹೇಳುತ್ತಿರುವುದೆಲ್ಲವೂ ಶುದ್ಧ ಸುಳ್ಳು, ಲಾಡೆನ್ ಅಮೆರಿಕ ಸೈನಿಕರಿಂದ ಹತನಾಗಲಿಲ್ಲ. ಬದಲಿಗೆ ತನ್ನನ್ನು ತಾನೇ ಸ್ಫೋಟಿಸಿಕೊಳ್ಳುವ ಮೂಲಕ ಸಾವಿಗೀಡಾದ. ಸ್ಫೋಟದಲ್ಲಿ ಆತನ ಇಬ್ಬರು ಅಂಗರಕ್ಷಕರು ಕೂಡ ಸಾವಿಗೀಡಾಗಿದ್ದರು. ಆದರೆ ಈ ವಿಷಯವನ್ನು ಮರೆಮಾಚಿರುವ ಅಮೆರಿಕ ಸೈನಿಕರು, ವಿಶ್ವಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ' ಎಂದು ಹೇಳಿದನು.

'ಬಿನ್ ಲಾಡೆನ್ ತುಂಬಾ ಧೈರ್ಯವಂತ. ಅಮೆರಿಕದ ವಿಶೇಷ ಸೈನಿಕ ಪಡೆ ತನ್ನ ನಿವಾಸದ ಕಾಪೌಂಡ್ ಒಳಗೆ ನುಗ್ಗುತ್ತಿದ್ದಂತೆಯೇ ಆತ, ತಾನು ಸೈನಿಕರಿಗೆ ಸಿಕ್ಕಿಬೀಳಬಾರದು ಮತ್ತು ತನ್ನ ಸಂಘಟನೆಯ ರಹಸ್ಯಗಳು ಅಮೆರಿಕ ಸೈನಿಕರಿಗೆ ತಿಳಿಯ ಬಾರದೆಂದು ತಾನೇ ಆತ್ಮಹತ್ಯೆ ಮಾಡಿಕೊಂಡ. ಇದಕ್ಕಾಗಿ ಬೆಲ್ಟ್ ಬಾಂಬ್ ಅನ್ನು ಸ್ಫೋಟಿಸಿದ. ಬಾಂಬ್ ಸ್ಫೋಟಗೊಂಡಾಗ ಆತನ ಪಕ್ಕದಲ್ಲಿದ್ದ ಇಬ್ಬರು ಅಂಗರಕ್ಷಕರು ಸೇರಿ ಲಾಡೆನ್ ಕೂಡ ಸಾವಿಗೀಡಾಗಿದ್ದ. ಆತನ ದೇಹ ತುಂಡಾಗಿ ಬಿದ್ದಿತ್ತು. ಆದರೆ ಈ ಸಂದರ್ಭದಲ್ಲಿ ಒಳನುಗ್ಗಿದ್ದ ಅಮೆರಿಕ ಸೈನಿಕರು ಲಾಡೆನ್ ಶವಕ್ಕೆ ಹಲವು ಬಾರಿ ಗುಂಡು ಹಾರಿಸಿದರು'.

'ಈ ವಿಚಾರ ಜಗತ್ತಿಗೆ ತಿಳಿಯಬಾರದೆಂದೇ ಅಮೆರಿಕ ಸೈನಿಕರು ಲಾಡೆನ್ ಶವವನ್ನು ಸಮುದ್ರದಲ್ಲಿ ಜಲಸಮಾಧಿ ಮಾಡಿದರು' ಎಂದು ಅಬ್ದುಲ್ ಫತ್ಹಾ ಹೇಳಿದ್ದಾನೆ.

ಅಲ್‌ಖೈದಾ ನಾಯಕ ಒಸಾಮಾ ಬಿನ್ ಲಾಡೆನ್ ಬಂಧನಕ್ಕಾಗಿ 2011ರಲ್ಲಿ ಅಮೆರಿಕದ ಸೈನಿಕಾಧಿಕಾರಿಗಳು 'ಆಪರೇಷನ್ ಗೆರಾನಿಮೋ' ಹೆಸರಲ್ಲಿ ಕಾರ್ಯಾಚರಣೆ ನಡೆಸಿದರು. ಈ ಕಾರ್ಯಾಚರಣೆಯ ನೇರ ದೃಶ್ಯಾವಳಿಗಳನ್ನು ಅಮೆರಿಕದ ಅಧ್ಯಕ್ಷರಾದ ಬರಾಕ್ ಒಬಾಮಾ ಅವರು ಶ್ವೇತಭವನದಲ್ಲಿಯೇ ಕುಳಿತು ನೇರ ಪ್ರಸಾರ ವೀಕ್ಷಿಸಿದ್ದರು. ರಾಡಾರ್ ವ್ಯವಸ್ಥೆಯ ಕಣ್ತಪ್ಪಿಸಿದ ಅಮೆರಿಕ ಸೈನಿಕ ಹೆಲಿಕಾಪ್ಟರ್‌ಗಳು ಪಾಕಿಸ್ತಾನವನ್ನು ಪ್ರವೇಶಿಸಿದ್ದವು.

ಇಸ್ಲಾಮಾಬಾದಿನ ಅಬೋಟಾಬಾದ್‌ನಲ್ಲಿ ಅಡಗಿದ್ದ ಬಿನ್ ಲಾಡೆನ್‌ನನ್ನು ಅಮೆರಿಕದ 'ನೇವಿ ಸೀಲ್‌' ಸೈನಿಕರು ಆತನ ನಿವಾಸಕ್ಕೇ ನುಗ್ಗಿ ಹತ್ಯೆ ಮಾಡಿದ್ದರು. ಆದರೆ ಲಾಡೆನ್ ಹತ್ಯೆಯ ನಂತರ ಈ ಕುರಿತು ಹಲವು ವಿವಾದಗಳು ಸೃಷ್ಟಿಯಾಗಿದ್ದು, ಇಂದಿಗೂ ಅವು ಮಾಧ್ಯಮಗಳಲ್ಲಿ ಚರ್ಚೆಗೀಡಾಗುತ್ತಿವೆ. ಇಂತಹುದೇ ಮತ್ತೊಂದು ವಿವಾದವನ್ನು ಉಗ್ರ ನಾಯಕ ಅಬ್ದುಲ್ ಫತ್ಹಾ ಇದೀಗ ಹುಟ್ಟುಹಾಕಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement