ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸ್ಫಾಟ್ ಫಿಕ್ಸಿಂಗ್: 'ಶ್ರೀ' ಆಪ್ತ ಸೇರಿ ಮತ್ತೆ ನಾಲ್ವರ ಬಂಧನ

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ದೆಹಲಿ ಪೊಲೀಸರು ಕ್ರಿಕೆಟಿಗ ಶ್ರೀಶಾಂತ್ ಆಪ್ತ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.

Srinivasa Murthy VN
Updated On : 29 May 2013, 8:04 am

ನವದೆಹಲಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ದೆಹಲಿ ಪೊಲೀಸರು ಕ್ರಿಕೆಟಿಗ ಶ್ರೀಶಾಂತ್ ಆಪ್ತ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.

ಫಿಕ್ಸಿಂಗ್ ನಡೆಸಲು ಸಹಾಯ ಮಾಡಿದ ಎಂಬ ಆರೋಪದ ಮೇಲೆ ಶ್ರೀಶಾಂತ್ ಆಪ್ತನಾಗಿರುವ ಅಭಿಷೇಕ್ ಶುಕ್ಲಾನನ್ನು ಪೊಲೀಸರು ಬಂಧಿಸಿದ್ದಾರೆ. ಅಭಿಷೇಕ್ ಶುಕ್ಲಾ ಮೇಲೆ ಭಾರತೀಯ ದಂಡ ಸಂಹಿತೆ ಕಲಂ 201(ಸಾಕ್ಷ್ಯ ಮರೆ ಮಾಚುವುದು)ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಬಂಧಿತ ಅಭಿಷೇಕ್ ಶುಕ್ಲಾ ಕ್ರಿಕೆಟಿಗರ ಫಿಕ್ಸಿಂಗ್ ಹಣವನ್ನು ಮುಚ್ಚಿಡಲು ಅವರಿಗೆ ಸಹಾಯ ಮಾಡುತ್ತಿದ್ದನು ಎಂದು ಹೇಳಲಾಗುತ್ತಿದೆ.

ಅಲ್ಲದೆ ಫಿಕ್ಸಿಂಗ್ ಪ್ರಕರಣದಲ್ಲಿ ಶ್ರೀಶಾಂತ್ ಬಂಧನವಾಗುತ್ತಿದ್ದಂತೆಯೇ ಬುಕ್ಕಿ ಮತ್ತು ಶ್ರೀಶಾಂತ್ ಆಪ್ತ ಜಿಜು ಜನಾರ್ಧನ ಅಭಿಷೇಕ್ ಶುಕ್ಲಾಗೆ ಕರೆ ಮಾಡಿ, ಶ್ರೀಶಾಂತ್ ಕೊಠಡಿಯಲ್ಲಿರುವ ಎಲ್ಲ ಸಾಕ್ಷ್ಯಗಳನ್ನು ಮತ್ತು ಹಣವನ್ನು ಮರೆಮಾಚಲು ಸೂಚಿಸಿದ್ದ ಅಂಶವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಅಂತೆಯೇ ರಾಜಸ್ತಾನ ತಂಡದ ಪರವಾಗಿ ಆಡುತ್ತಿದ್ದ ಮತ್ತೋರ್ವ ಬಂಧಿತ ಆಟಗಾರ ಅಜಿತ್ ಚಾಂಡೀಲಾ ಜೊತೆ ಸಂಪರ್ಕವಿರಿಸಿಕೊಂಡಿದ್ದ ಇತರೆ ಮೂವರು ಬುಕ್ಕಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ವಿಕ್ಕಿ ಚೌಧರಿ, ನಿತಿನ್ ಜೈನ್ ಮತ್ತು ವಿನೋದ್ ಶರ್ಮಾ ಎಂದು ಗುರುತಿಸಲಾಗಿದೆ.

ಐಪಿಎಲ್-6ರ ಎಲ್ಲ ಪಂದ್ಯಗಳನ್ನು ತನಿಖೆಗೊಳಪಡಿಸಿ: ಶರದ್ ಪವಾರ್
ಈ ನಡುವೆ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಬಗ್ಗೆ ಮಾತನಾಡಿರುವ ಬಿಸಿಸಿಐನ ಮಾಜಿ ಅಧ್ಯಕ್ಷ ಶರದ್ ಪವಾರ್ ಅವರು, ಪ್ರಸಕ್ತ ವರ್ಷದ ಐಪಿಎಲ್-6ರ ಸರಣಿಯ ಎಲ್ಲ ಪಂದ್ಯಗಳನ್ನು ತನಿಖೆಗೊಳಪಡಿಸುವಂತೆ ಕೇಂದ್ರ ಗೃಹ ಇಲಾಖೆಯನ್ನು ಆಗ್ರಹಿಸಿದ್ದಾರೆ.

'ಸ್ಪಾಟ್ ಫಿಕ್ಸಿಂಗ್ ಪ್ರಕರಣದ ತನಿಖೆಯನ್ನು ಬಿಸಿಸಿಐ ಕೇಂದ್ರ ಗೃಹ ಇಲಾಖೆಗೆ ಒಪ್ಪಿಸಿ, ಐಪಿಎಲ್ 6ರ ಎಲ್ಲ 75 ಪಂದ್ಯಗಳನ್ನು ತನಿಖೆಗೊಳಪಡಿಸುವಂತೆ ಗೃಹ ಇಲಾಖೆಗೆ ಪತ್ರ ಬರೆಯಬೇಕು. ಗೃಹ ಇಲಾಖೆಗೆ ಮಾತ್ರ ಎಲ್ಲ ವಿಭಾಗಗಳಲ್ಲಿ ತನಿಖೆ ನಡೆಸುವ ಅಧಿಕಾರವಿದ್ದು, ಪಾರದರ್ಶಕ ತನಿಖೆ ಸಾಧ್ಯವಾಗಲಿದೆ. ಆದರೆ ಈ ಬಗ್ಗೆ ಬಿಸಿಸಿಐ ಅನ್ನು ಪ್ರಶ್ನಿಸಿದರೆ ಅದು ತನ್ನದೇ ಆದ ಭ್ರಷ್ಟಾಚಾರ ನಿಯಂತ್ರಣ ತಂಡವನ್ನು ಹೊಂದಿದ್ದು, ಆ ತಂಡವೇ ತನಿಖೆ ಮುಂದುವರೆಸಲಿದೆ ಎಂದು ಹೇಳುತ್ತಿದೆ. ಪ್ರಕರಣದ ತೀವ್ರತೆಯನ್ನು ಬಿಸಿಸಿಐ ಇನ್ನೂ ಸಂಪೂರ್ಣವಾಗಿ ಅರಿತಂತಿಲ್ಲ. ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಬಗ್ಗೆ ಬಿಸಿಸಿಐ ಕಠಿಣ ನಿಲುವು ತಾಳಬೇಕಿದೆ' ಎಂದು ಪವಾರ್ ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement