ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನಾಳೆಯಿಂದ ಗುಟ್ಕಾ ನಿಷೇಧ?

ರಾಜ್ಯಾದ್ಯಂತ ನಾಳೆಯಿಂದ ಗುಟ್ಕಾ ಮತ್ತು ಪಾನ್ ಉತ್ಪನ್ನಗಳ ಮೇಲೆ ನಿಷೇಧ ಹೇರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

Srinivasa Murthy VN
Updated On : 30 May 2013, 6:28 am

ಬೆಂಗಳೂರು: ರಾಜ್ಯಾದ್ಯಂತ ನಾಳೆಯಿಂದ ಗುಟ್ಕಾ ಮತ್ತು ಪಾನ್ ಉತ್ಪನ್ನಗಳ ಮೇಲೆ ನಿಷೇಧ ಹೇರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಗುಟ್ಕಾ ಉತ್ಪನ್ನಗಳನ್ನು ಕರ್ನಾಟಕದಲ್ಲಿ ನಿಷೇಧ ಹೇರುವ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದ್ದು, ಇಂದು ಈ ಬಗ್ಗೆ ವಿಧಾನಸೌಧದಲ್ಲಿ ಸಭೆ ಏರ್ಪಡಿಸಲಾಗಿತ್ತು. ಸಭೆಯಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳು ಸೇರಿದಂತೆ ಕೆಲ ಜಿಲ್ಲಾಧಿಕಾರಿಗಳು ಪಾಲ್ಗೊಂಡಿದ್ದರು. ಸಭೆಯಲ್ಲಿ ರಾಜ್ಯದಲ್ಲಿ ಗುಟ್ಕಾ ಉತ್ಪನ್ನಗಳಿಗೆ ನಿಷೇಧ ಹೇರುವುದಕ್ಕೆ ಬಹುತೇಕ ಅಧಿಕಾರಿಗಳು ಒಲವು ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಯು.ಟಿ.ಖಾದರ್ ಅವರು, 'ಜನರ ಆರೋಗ್ಯವನ್ನು ದೃಷ್ಟಿಯಲ್ಲಿಕೊಂಡು ಈ ಚಿಂತನೆ ಮಾಡಲಾಗಿದೆ. ಆದರೆ ಈ ಬಗ್ಗೆ ಈ ಕೂಡಲೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಇದಕ್ಕಾಗಿ ಮುಂದಿನ ದಿನಗಳಲ್ಲಿ ಅಧಿಕಾರಿಗಳ ಸಭೆಯನ್ನು ಕರೆಯಲಾಗಿದ್ದು, ಅನಂತರ ನಿರ್ಧಾರ ಕೈಗೊಳ್ಳಲಾಗುತ್ತದೆ' ಎಂದು ಹೇಳಿದರು.

ಆದರೆ ಗುಟ್ಕಾ ನಿಷೇಧದಿಂದ ರಾಜ್ಯದ ಅಡಿಕೆ ಬೆಳೆಗಾರರ ಮೇಲೆ ಉಂಟಾಗುವ ಪರಿಣಾಮದ ಕುರಿತು ಸಚಿವರನ್ನು ಪ್ರಶ್ನಿಸಿದಾಗ ಅವರು, 'ಗುಟ್ಕಾ ನಿಷೇಧದಿಂದ ರಾಜ್ಯದ ಅಡಿಕೆ ಬೆಳೆಗಾರರ ಮೇಲೆ ಯಾವುದೇ ರೀತಿ ದುಷ್ಪರಿಣಾಗಳು ಬೀಳುವುದಿಲ್ಲ. ರೈತರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಬೇರೆ ದೇಶಗಳ ನಿರುಪಯೋಗಿ ಅಡಿಕೆಯನ್ನು ಭಾರತಕ್ಕೆ ಆಮದು ಮಾಡಿಕೊಂಡು ಗುಟ್ಕಾ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಇದರಿಂದ ಜನರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿವೆ. ಹೀಗಾಗಿ ಗುಟ್ಕಾ ನಿಷೇಧ ಚಿಂತನೆ ನಡೆಸಲಾಗುತ್ತಿದೆ' ಎಂದು ಅವರು ಹೇಳಿದರು.

ಸರ್ಕಾರದ ಈ ನಿರ್ಧಾರದ ವಿರುದ್ಧ ಹಲವು ಶಾಸಕರು ಮತ್ತು ವಿಪಕ್ಷ ನಾಯಕರು ವಿರೋಧ ವ್ಯಕ್ತಪಡಿಸಿದ್ದು, ಗುಟ್ಕಾ ನಿಷೇಧದಿಂದ ರಾಜ್ಯದ ರೈತರು ತೀವ್ರ ಸಂಕಷ್ಟಕ್ಕೆ ಗುರಿಯಾಗುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

'ಭಾರತದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆ ಬೆಳೆಯುವ ರಾಜ್ಯವೆಂದರೆ ಕರ್ನಾಟಕ. ರಾಜ್ಯದ ಬಹುತೇಕ ಅಡಿಕೆ ಬೆಳೆಗಾರರು ಗುಟ್ಕಾ ಉತ್ಪಾದಕರನ್ನೇ ನಂಬಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಗುಟ್ಕಾ ಉತ್ಪನ್ನಗಳ ಮೇಲೆ ನಿಷೇಧ ಹೇರುವುದು ಸರಿಯಲ್ಲ. ಬದಲಿಗೆ ತಂಬಾಕು ಉತ್ಪನ್ನಗಳ ವಿರುದ್ಧ ಹೇಗೆ ಜಾಗೃತಿ ಮೂಡಿಸಲಾಗುತ್ತಿದೆಯೋ ಹಾಗೆಯೇ ಗುಟ್ಕಾ ಉತ್ಪನ್ನಗಳ ವಿರುದ್ಧವೂ ಜಾಗೃತಿ ಮೂಡಿಸಿ' ಎಂದು ಶಾಸಕ ಮತ್ತು ರೈತಪರ ನಾಯಕ ಕೆಎಸ್ ಪುಟ್ಟಣಯ್ಯ ಅವರು ಹೇಳಿದ್ದಾರೆ.

ಗುಟ್ಕಾ ಉತ್ಪನ್ನಗಳನ್ನು ನಿಷೇಧಿಸುವುದರಿಂದ ಅಡಿಕೆ ಬೆಳೆಯುವ ರೈತರ ನಾಶಕ್ಕೆ ಸರ್ಕಾರ ಬುನಾದಿ ಹಾಕುತ್ತಿದೆ. ಗುಟ್ಕಾ ನಿಷೇಧ ಮಾಡಿದರೆ ತಾಯಿಯೇ ಮಗುವಿಗೆ ವಿಷ ನೀಡಿದಂತಾಗುತ್ತದೆ ಎಂದು ಶಾಸಕ ಜೀವರಾಜ್ ಅವರು ಕಿಡಿಕಾರಿದ್ದಾರೆ.

ಈ ನಡುವೆ ವಿಧಾನಸೌಧದಲ್ಲಿ ಇಂದು ಸಂಜೆ ನಡೆಯುತ್ತಿರುವ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುಟ್ಕಾ ನಿಷೇಧದ ಕುರಿತು ಸಭೆಗೆ ಮಾಹಿತಿ ನೀಡಿದರು. ಆದರೆ ಸರ್ಕಾರದ ತೀರ್ಮಾನಕ್ಕೆ ಸರ್ಕಾರದ ಕೆಲ ಸಚಿವರಿಂದಲೇ ವಿರೋಧ ವ್ಯಕ್ತವಾಗುತ್ತಿದೆ. ಅಲ್ಲದೆ ಕೆಲ ರೈತಪರ ಸಂಘಟನೆಗಳು ಮತ್ತು ಕರಾವಳಿ ಭಾಗದ ಅಡಿಕೆ ಬೆಳೆಗಾರರು ಗುಟ್ಕಾ ಮೇಲೆ ನಿಷೇಧ ಹೇರಿದರೆ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement