ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಅಧ್ಯಕ್ಷ ಸ್ಥಾನಕ್ಕೆ ಶುಕ್ಲಾ ರಾಜಿನಾಮೆ

ಸ್ಪಾಟ್ ಫಿಕ್ಸಿಂಗ್ ಹಗರಣದಿಂದ ಬೇಸತ್ತಿರುವ ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

Srinivasa Murthy VN
Updated On : 1 Jun 2013, 7:40 am

ಮುಂಬೈ: ಸ್ಪಾಟ್ ಫಿಕ್ಸಿಂಗ್ ಹಗರಣದಿಂದ ಬೇಸತ್ತಿರುವ ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ಶುಕ್ಲಾ ಅವರ ರಾಜಿನಾಮೆ ವಿಚಾರ ಇಂದು ರಾತ್ರಿ ಅಧಿಕೃತವಾಗಿ ಹೊರ ಬೀಳುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಸ್ಪಾಟ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ವರದಿಯಿಂದ ರಾಜೀವ್ ಶುಕ್ಲಾ ಅವರು ನೊಂದಿದ್ದರು ಎಂದು ತಿಳಿದು ಬಂದಿದೆ. ಅಲ್ಲದೆ ತಮ್ಮ ಸಹೋದ್ಯೋಗಿಗಳ ತೀವ್ರ ಒತ್ತಡದಿಂದಾಗಿ ಅವರು ತಮ್ಮ ಐಪಿಎಲ್ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ಈ ನಡುವೆ ಜೂನ್ 8ರಂದು ನಡೆಸಲು ಚಿಂತಿಸಲಾಗಿದ್ದ ಬಿಸಿಸಿಐ ಕಾರ್ಯಕಾರಿ ಸಮಿತಿಯ ಸಭೆಯನ್ನು ನಾಳೆಯೇ ಕರೆಯಲು ತೀರ್ಮಾನಿಸಲಾಗಿದೆ. ನಾಳೆ ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ಅವರು ಕೂಡ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆದರೆ ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ಅವರು ತಮ್ಮ ರಾಜಿನಾಮೆಗೆ ಶರತ್ತುಗಳನ್ನು ಹಾಕಿದ್ದು, ತಮ್ಮ ರಾಜಿನಾಮೆಯ ನಂತರ ತಮಗೆ ಐಸಿಸಿಯಲ್ಲಿ ಪ್ರಮುಖ ಹುದ್ದೆಯನ್ನು ನೀಡಬೇಕು ಮತ್ತು ಬಿಸಿಸಿಐ ಕಾರ್ಯಕಾರಿ ಸಮಿತಿಯಲ್ಲಿ ಬಾಕಿ ಉಳಿದಿರುವ ಹುದ್ದೆಗಳನ್ನು ಭರ್ತಿ ಮಾಡಲು ತಮಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು ಎಂದು ಶ್ರೀನಿವಾಸನ್ ಷರತ್ತು ವಿಧಿಸಿದ್ದಾರೆ. ಆ ಮೂಲಕ ತಮ್ಮ ರಾಜಿನಾಮೆಯ ನಂತರವೂ ಬಿಸಿಸಿಐ ಮೇಲೆ ತಮ್ಮ ಪ್ರಭುತ್ವ ಸಾಧಿಸಲು ಶ್ರೀನಿವಾಸನ್ ಪ್ರಯತ್ನಿಸಿದ್ದಾರೆ.

ಆದರೆ ಶ್ರೀನಿವಾಸನ್ ಅವರ ಷರತ್ತಿಗೆ ಬಿಸಿಸಿಐ ಪದಾಧಿಕಾರಿಗಳು ವಿರೋಧ ವ್ಯಕ್ತಪಡಿಸಿದ್ದು, ಐಪಿಎಲ್ ಅಧ್ಯಕ್ಷರಾಗಿರುವ ರಾಜೀವ್ ಶುಕ್ಲಾ ಅವರು ಕೂಡ ಶ್ರೀನಿವಾಸನ್ ಷರತ್ತಿಗೆ ವಿರೋಧ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ. ಅಲ್ಲದೆ ಶ್ರೀನಿವಾಸನ್ ಅವರ ಹಠಮಾರಿ ಧೋರಣೆಗೆ ರಾಜೀವ್ ಶುಕ್ಲಾ ಅವರು ಬೇಸರ ವ್ಯಕ್ತಪಡಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ ಬಿಸಿಸಿಐ ಕಾರ್ಯಕಾರಿ ಸಮಿತಿ ಸದಸ್ಯರಾಗಿರುವ ಅರುಣ್ ಜೇಟ್ಲಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ನಾಳೆ ಪ್ರಮುಖ ಬದಲಾವಣೆಯಾಗಲಿದೆ ಎಂದು ಹೇಳಿದ್ದರು. ಇದಕ್ಕೆ ಪೂರಕವೆಂಬಂತೆ ನಾಳೆ ಬಿಸಿಸಿಐ ತುರ್ತು ಸಭೆ ಕರೆದಿರುವ ಅಧ್ಯಕ್ಷ ಶ್ರೀನಿವಾಸನ್ ಅವರು ರಾಜಿನಾಮೆ ಸಲ್ಲಿಸುವ ಸಾಧ್ಯತೆ ಇದೆ. ಒಟ್ಟಾರೆ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಿಂದಾಗಿ ಬಿಸಿಸಿಐನ ಮೊದಲ ವಿಕೆಟ್ ಪತನವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement