ಭಾರತದ ಗ್ರಾಮವನ್ನು ಆಕ್ರಮಿಸಿಕೊಂಡ ಪಾಕ್ ಸೈನಿಕರು
ಶ್ರೀನಗರ: ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ನಿರಂತರ ಗುಂಡಿನ ಚಕಮಕಿ ನಡೆದಿದ್ದು, ಭಾರತದ ಗಡಿಭಾಗಕ್ಕೆ ಸೇರಿದ ಗ್ರಾಮವನ್ನು ಪಾಕ್ ಸೈನಿಕರು ಆಕ್ರಮಿಸಿಕೊಂಡಿದ್ದಾರೆ.
ಕಾಶ್ಮೀರದ ಪೂಂಛ್ ಜಿಲ್ಲೆಯ ಮೆಂದಾರ್ ಸೆಕ್ಟರ್ನಲ್ಲಿ ಕಳೆದ ರಾತ್ರಿಯಿಂದ ನಡೆಯುತ್ತಿರುವ ಗುಂಡಿನ ಚಕಮಕಿ ಇಂದು ಕೂಡ ಮುಂದುವರೆದಿದ್ದು, ಭಾರತದ ಗಡಿಯೊಳಗೆ ನುಸುಳಿರುವ ಪಾಕ್ ಸೈನಿಕರು ಗಡಿಯಲ್ಲಿರುವ ಶಾಲಾಭಾತಾ ಎಂಬ ಗ್ರಾಮವನ್ನು ಆಕ್ರಮಿಸಿಕೊಂಡಿದ್ದಾರೆ. ಪಾಕ್ ಸೈನಿಕರನ್ನು ಹಿಮ್ಮೆಟಿಸಲು ಭಾರತದ ಸೈನಿಕರು ಹರಸಾಹಸ ಪಡುತ್ತಿದ್ದು, ಉಭಯ ದೇಶಗಳ ಸೈನಿಕರು ನಿರಂತರ ಗುಂಡಿನ ದಾಳಿಯಲ್ಲಿ ತೊಡಗಿದ್ದಾರೆ.
2001-2002ರಿಂದೀಚೆಗೆ ಇದೇ ಮೊದಲ ಬಾರಿಗೆ ಭಾರತಕ್ಕೆ ಸಂಬಂಧಿಸಿದ ಗ್ರಾಮವನ್ನು ಪಾಕಿಸ್ತಾನ ಸೈನಿಕರು ಆಕ್ರಮಿಸಿದ್ದು, ಉಭಯ ಸೈನಿಕರ ನಡುವೆ ಭಾರಿ ಪ್ರಮಾಣದಲ್ಲಿ ಗುಂಡಿನ ಕಾಳಗ ನಡೆದಿದೆ.