ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸುಗ್ರೀವಾಜ್ಞೆ: ಪ್ರಧಾನಿ-ರಾಹುಲ್ ಭೇಟಿ

ವಿವಾದಿತ ಸುಗ್ರೀವಾಜ್ಞೆ ಕುರಿತಂತೆ ಚರ್ಚಿಸಲು ರಾಹುಲ್ ಗಾಂಧಿ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

Srinivasa Murthy VN
Updated On : 2 Oct 2013, 11:55 am

ನವದೆಹಲಿ: ವಿವಾದಿತ ಸುಗ್ರೀವಾಜ್ಞೆ ಕುರಿತಂತೆ ಚರ್ಚಿಸಲು ಬುಧವಾರ ಕಾಂಗ್ರೆಸ್ ಉಪಾದ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಇಂದು ಬೆಳಗ್ಗೆ 9:45ಕ್ಕೆ ನವದೆಹಲಿಯ ಪ್ರಧಾನಿ ನಿವಾಸಕ್ಕೆ ಆಗಮಿಸಿದ್ದ ಕಾಂಗ್ರೆಸ್ ಉಪಾದ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಚರ್ಚಿಸಿದ್ದಾರೆ. ತೀವ್ರ ಚರ್ಚೆಗೆ ಗ್ರಾಸವಾಗಿರುವ ವಿವಾದಿತ ಸುಗ್ರೀವಾಜ್ಞೆ ಕುರಿತು ಉಭಯ ನಾಯಕರು ಸುಮಾರು 45 ನಿಮಿಷಗಳ ಕಾಲ ಚರ್ಚಿಸಿದರು ಎಂದು ತಿಳಿದು ಬಂದಿದೆ.

ಇದೇ ವೇಳೆ ವಿವಾದದ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ, ತಾವು ಪ್ರಧಾನಿ ಹುದ್ದೆಗೆ ಅಗೌರವ ತೋರಿಲ್ಲ. ಸರ್ಕಾರದ ಸುಗ್ರೀವಾಜ್ಞೆ ಬಗ್ಗೆ ದೇಶದ ಜನತೆ ಹೊಂದಿದ್ದ ಅಭಿಪ್ರಾಯವನ್ನು ಮಾತ್ರ ಹೊರಹಾಕಿದ್ದೇನೆ. ಇದರಿಂದ ನೀವು ಮುಜುಗರಕ್ಕೀಡಾಗುವ ಅವಶ್ಯಕತೆ ಇಲ್ಲ ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಕಳಂಕಿತ ಶಾಸಕ ಮತ್ತು ಸಂಸದರ ಪ್ರಜಾ ಪ್ರತಿನಿಧ್ಯವನ್ನು ಅಮಾನತ್ತಿಲ್ಲಿಡುವ ಸುಪ್ರೀಂಕೋರ್ಟ್ ತೀರ್ಪಿಗೆ ವಿರುದ್ಧವಾಗಿ ಕೇಂದ್ರ ಸರ್ಕಾರ ಹೊರಡಿಸಿದ್ದ ನೂತನ ಸುಗ್ರೀವಾಜ್ಞೆಯನ್ನು ಕಾಂಗ್ರೆಸ್ ಉಪಾದ್ಯಕ್ಷ ರಾಹುಲ್ ಗಾಂಧಿ ಅವರು ಟೀಕಿಸಿದ್ದರು. ಕೇಂದ್ರ ಸರ್ಕಾರದ ನಿಲುವನ್ನು ತಮ್ಮದೇ ಪಕ್ಷದ ಮುಖಂಡರೊಬ್ಬರು ಟೀಕಿಸಿದ್ದ ಹಿನ್ನಲೆಯಲ್ಲಿ ಕಾಂಗ್ರೆಸ್ ತೀವ್ರ ಮುಜುಗರಕ್ಕೀಡಾಗಿತ್ತು. ಬಿಜೆಪಿ ಸೇರಿದಂತೆ ಪ್ರತಿಪಕ್ಷಗಳು ಕೂಡ ಈ ಬಗ್ಗೆ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದವು.

ಕೇಂದ್ರ ಸರ್ಕಾರ ತೆಗೆದುಕೊಂಡಿದ್ದ ಈ ನಿರ್ಧಾರ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಹೀಗಾಗಿ ಕೇಂದ್ರದ ಯುಪಿಎ ಸರ್ಕಾರ ತಾನು ಹೊರಡಿಸಿದ್ದ ಈ ಸುಗ್ರೀವಾಜ್ಞೆಯನ್ನು ಹಿಂಪಡೆಯುವ ಸಾಧ್ಯತೆ ಇದೆ. ಇದರ ಬೆನ್ನಲ್ಲೇ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ರಾಹುಲ್ ಗಾಂಧಿ ಅವರು ಭೇಟಿ ಮಾಡಿ ಚರ್ಚಿಸಿರುವುದು ಮತ್ತಷ್ಟು ಮಹತ್ವ ಪಡೆದುಕೊಂಡಿದೆ.

ನಿನ್ನೆ ರಾತ್ರಿಯಷ್ಟೇ ಅಮೆರಿಕ ಪ್ರವಾಸದಿಂದ ಭಾರತಕ್ಕೆ ವಾಪಸಾಗಿದ್ದ ಪ್ರಧಾನಿ ಮನಮೋಹನ ಸಿಂಗ್ ಅವರು ಗಾಂಧಿ ಜಯಂತಿಯ ಹಿನ್ನಲೆಯಲ್ಲಿ ಇಂದು ಬೆಳಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ರಾಜ್ ಘಾಟ್‌ಗೆ ತೆರಳಿ ನಮನ ಸಲ್ಲಿಸಿ ವಾಪಸಾಗಿದ್ದರು. ಅಲ್ಲದೆ ಇಂದು ನಡೆಯಲಿರುವ ಕಾಂಗ್ರೆಸ್ ಕೋರ್ ಕಮಿಟಿ ಸಭೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಭಾಗಿಯಾಗಲಿದ್ದು, ಸುಗ್ರೀವಾಜ್ಞೆಯ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ.

ವಿವಿಧ ಪ್ರಕರಣಗಳಲ್ಲಿ ಸಿಲುಕಿ 2ವರ್ಷಕ್ಕಿಂತ ಅಧಿಕ ಕಾಲ ಸೆರೆವಾಸದಲ್ಲಿದ್ದ ಪ್ರಜಾ ಪ್ರತಿನಿಧಿಗಳನ್ನು ಸಾರ್ವಜನಿಕ ಹುದ್ದೆಗಳಿಂದ ವಜಾಗೊಳಿಸಬೇಕು ಎಂಬ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಸೆಪ್ಟಂಬರ್ 24ರಂದು ಕೇಂದ್ರ ಸರ್ಕಾರ ಹೊಸ ಸುಗ್ರೀವಾಜ್ಞೆಯನ್ನು ಹೊರಡಿಸಿತ್ತು. ಪ್ರಸ್ತುತ ಸುಗ್ರೀವಾಜ್ಞೆಯನ್ನು ಪ್ರಣಬ್ ಮುಖರ್ಜಿ ಅವರ ಅಂಕಿತಕ್ಕಾಗಿ ರಾಷ್ಟ್ರಪತಿ ಭವನಕ್ಕೆ ಕಳುಹಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement