ಸುಗ್ರೀವಾಜ್ಞೆ ವಾಪಸ್‌ಗೆ ಕೇಂದ್ರ ನಿರ್ಧಾರ
ವಿವಾದಿತ ಸುಗ್ರೀವಾಜ್ಞೆಯನ್ನು ವಾಪಸ್ ಪಡೆಯಲು ಬುಧವಾರ ನಡೆದ ಕಾಂಗ್ರೆಸ್ ಕೋರ್ ಕಮಿಟಿ ಸಭೆಯಲ್ಲಿ ನಿರ್ಧರಿಸಲಾಗಿದೆ.
ನವದೆಹಲಿ: ವಿವಾದಿತ ಸುಗ್ರೀವಾಜ್ಞೆಯನ್ನು ವಾಪಸ್ ಪಡೆಯಲು ಬುಧವಾರ ನಡೆದ ಕಾಂಗ್ರೆಸ್ ಕೋರ್ ಕಮಿಟಿ ಸಭೆಯಲ್ಲಿ ನಿರ್ಧರಿಸಲಾಗಿದೆ.
ಬುಧವಾರ ಬೆಳಗ್ಗೆ ನವದೆಹಲಿಯ ಪ್ರಧಾನಿ ಮನಮೋಹನ್ ಸಿಂಗ್ ನಿವಾಸದಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಕಳಂಕಿತ ಶಾಸಕ ಮತ್ತು ಸಂಸದರ ಪ್ರಜಾ ಪ್ರತಿನಿಧ್ಯವನ್ನು ಅಮಾನತ್ತಿಲ್ಲಿಡುವ ಸುಪ್ರೀಂಕೋರ್ಟ್ ತೀರ್ಪಿಗೆ ವಿರುದ್ಧವಾಗಿ ಕೇಂದ್ರ ಸರ್ಕಾರ ಹೊರಡಿಸಿದ್ದ ನೂತನ ಸುಗ್ರೀವಾಜ್ಞೆಯನ್ನು ಕಾಂಗ್ರೆಸ್ ಉಪಾದ್ಯಕ್ಷ ರಾಹುಲ್ ಗಾಂಧಿ ಅವರು ಟೀಕಿಸಿದ್ದರು. ಕೇಂದ್ರ ಸರ್ಕಾರದ ನಿಲುವನ್ನು ತಮ್ಮದೇ ಪಕ್ಷದ ಮುಖಂಡರೊಬ್ಬರು ಟೀಕಿಸಿದ್ದ ಹಿನ್ನಲೆಯಲ್ಲಿ ಕಾಂಗ್ರೆಸ್ ತೀವ್ರ ಮುಜುಗರಕ್ಕೀಡಾಗಿತ್ತು. ಬಿಜೆಪಿ ಸೇರಿದಂತೆ ಪ್ರತಿಪಕ್ಷಗಳು ಕೂಡ ಈ ಬಗ್ಗೆ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದವು.
ಇದೇ ವಿಚಾರವಾಗಿ ಇಂದು ಬೆಳಗ್ಗೆ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿದ್ದ ರಾಹುಲ್ ಗಾಂಧಿ ಅವರು, ತಾವು ಪ್ರಧಾನಿ ಹುದ್ದೆಗೆ ಅಗೌರವ ತೋರಿಲ್ಲ. ಸರ್ಕಾರದ ಸುಗ್ರೀವಾಜ್ಞೆ ಬಗ್ಗೆ ದೇಶದ ಜನತೆ ಹೊಂದಿದ್ದ ಅಭಿಪ್ರಾಯವನ್ನು ಮಾತ್ರ ಹೊರಹಾಕಿದ್ದೇನೆ. ಇದರಿಂದ ನೀವು ಮುಜುಗರಕ್ಕೀಡಾಗುವ ಅವಶ್ಯಕತೆ ಇಲ್ಲ ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದರು.
ಇದಾದ ಬಳಿಕ ನಡೆದ ಕಾಂಗ್ರೆಸ್ ಕೋರ್ ಕಮಿಟಿ ಸಭೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಸೇರಿದಂತೆ ಕೋರ್ ಕಮಿಟಿಯ ಹಲವು ಸದಸ್ಯರು ಪಾಲ್ಗೊಂಡಿದ್ದರು. ಆದರೆ ರಕ್ಷಣಾ ಸಚಿವ ಎ.ಕೆ. ಆಂಟನಿ ಮತ್ತು ಸಚಿವ ಚಿದಂಬರಂ ಮಾತ್ರ ಗೈರಾಗಿದ್ದರು. ಇದೀಗ ಕೋರ್ ಕಮಿಟಿ ಸಭೆ ಅಂತ್ಯವಾಗಿದ್ದು, ಪ್ರತಿಪಕ್ಷಗಳ ವಿರೋಧಕ್ಕೆ ಮಣಿದಿರುವ ಕೇಂದ್ರ ಸರ್ಕಾರ ತನ್ನ ವಿವಾದಿತ ಸುಗ್ರೀವಾಜ್ಞೆಯನ್ನು ಹಿಂಪಡೆದುಕೊಂಡಿದೆ.
ಸುಗ್ರೀವಾಜ್ಞೆ ವಿಚಾರವಾಗಿ ಪ್ರಧಾನಿ ಮನಮೋಹನ್ ಸಿಂಗ್ ಅವರು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿ ಮಾಡಲಿದ್ದು, ಸುಗ್ರೀವಾಜ್ಞೆ ವಾಪಸ್ ಪಡೆಯುವ ಕುರಿತು ಚರ್ಚೆ ನಡೆಸಲಿದ್ದು, ಸುಗ್ರೀವಾಜ್ಞೆಗೆ ಅಂಕಿತ ಹಾಕದಂತೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಮನವರಿಕೆ ಮಾಡಿಕೊಡಲಿದ್ದಾರೆ.
ವಿವಿಧ ಪ್ರಕರಣಗಳಲ್ಲಿ ಸಿಲುಕಿ 2ವರ್ಷಕ್ಕಿಂತ ಅಧಿಕ ಕಾಲ ಸೆರೆವಾಸದಲ್ಲಿದ್ದ ಪ್ರಜಾ ಪ್ರತಿನಿಧಿಗಳನ್ನು ಸಾರ್ವಜನಿಕ ಹುದ್ದೆಗಳಿಂದ ವಜಾಗೊಳಿಸಬೇಕು ಎಂಬ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಸೆಪ್ಟಂಬರ್ 24ರಂದು ಕೇಂದ್ರ ಸರ್ಕಾರ ಹೊಸ ಸುಗ್ರೀವಾಜ್ಞೆಯನ್ನು ಹೊರಡಿಸಿತ್ತು. ಪ್ರಸ್ತುತ ಸುಗ್ರೀವಾಜ್ಞೆಯನ್ನು ಪ್ರಣಬ್ ಮುಖರ್ಜಿ ಅವರ ಅಂಕಿತಕ್ಕಾಗಿ ರಾಷ್ಟ್ರಪತಿ ಭವನಕ್ಕೆ ಕಳುಹಿಸಲಾಗಿದೆ.