ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕೇರಾನ್‌ನಲ್ಲಿ ಮುಂದುವರಿದ ಸೇನಾ ಕಾರ್ಯಾಚರಣೆ

ಕೇರಾನ್ ಸೆಕ್ಟರ್‌ನಲ್ಲಿ ನುಸುಳಿರುವ ಪಾಕ್ ಉಗ್ರರನ್ನು ಹಿಮ್ಮೆಟಿಸಲು ಯೋಧರು ನಡೆಸುತ್ತಿರುವ ಕಾರ್ಯಾಚರಣೆ ಇಂದು ಕೂಡ ಮುಂದುವರೆದಿದೆ.

Srinivasa Murthy VN
Updated On : 4 Oct 2013, 7:22 am

ಶ್ರೀನಗರ: ಭಾರತೀಯ ಗಡಿ ಪ್ರದೇಶ ಕೇರಾನ್ ಸೆಕ್ಟರ್‌ನಲ್ಲಿ ನುಸುಳಿರುವ ಪಾಕ್ ಉಗ್ರರನ್ನು ಹಿಮ್ಮೆಟಿಸಲು ಭಾರತೀಯ ಯೋಧರು ನಡೆಸುತ್ತಿರುವ ಕಾರ್ಯಾಚರಣೆ ಶುಕ್ರವಾರವೂ ಮುಂದುವರೆದಿದೆ.

ಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ ಇರುವ ಕೇರಾನ್ ಸೆಕ್ಟರ್‌ನಲ್ಲಿ ಕಳೆದ 10 ದಿನಗಳಿಂದ ನಡೆಯುತ್ತಿರುವ ಸೇನಾ ಕಾರ್ಯಾಚರಣೆ ಇಂದು ಕೂಡ ಮುಂದುವರೆದಿದ್ದು, ಒಳ ನುಸುಳಿರುವ ಸುಮಾರು 35-40 ಉಗ್ರರಿಗಾಗಿ ತೀವ್ರ ಶೋಧಕಾರ್ಯ ನಡೆಸಲಾಗುತ್ತಿದೆ. ಭಾರತೀಯ ಸೇನೆ ಹೇಳಿಕೊಳ್ಳುವಂತೆ ಈಗಾಗಲೇ 15 ಉಗ್ರರನ್ನು ಹತ್ಯೆಗೈದಿದ್ದು, ಉಳಿದ ಉಗ್ರರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎನ್ನಲಾಗುತ್ತಿದೆ.

ಆದರೆ ಮೂಲಗಳ ಪ್ರಕಾರ ಭಾರತೀಯ ಸೈನಿಕರು ಹತ್ಯೆಗೈದಿರುವ 15 ಉಗ್ರರ ಶವಗಳು ಇದುವೆರೆಗೂ ಪತ್ತೆಯಾಗಿಲ್ಲ. ಅಲ್ಲದೆ ಇದೀಗ ಒಳ ನುಸುಳಿರುವ 35-40 ಮಂದಿ ನುಸುಳುಕೋರರು ಉಗ್ರರಲ್ಲ. ಬದಲಿಗೆ ಅವರು ಪಾಕಿಸ್ತಾನದ ವಿಶೇಷ ಸೈನಿಕ ಪಡೆಯ ಸದಸ್ಯರು ಎಂಬ ಆಘಾತಕಾರಿ ಅಂಶ ಬಯಲಾಗುತ್ತಿದೆ. ಈ ವಿಶೇಷ ಪಡೆಯ ಸೈನಿಕರು ವಿಶೇಷವಾಗಿ ತರಬೇತಿ ಪಡೆದವರಾಗಿದ್ದು, ಭಾರತೀಯ ಗಡಿಯನ್ನು ಪ್ರವೇಶಿಸುವಾಗ ತಮ್ಮೊಂದಿಗೆ ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡುಗಳನ್ನು ತಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಅಲ್ಲದೆ ಕೆರಾನ್ ಪ್ರದೇಶ ಅತ್ಯಂತ ಎತ್ತರದ ಮತ್ತು ದಟ್ಟ ಅರಣ್ಯದಿಂದ ಕೂಡಿರುವ ಪ್ರದೇಶವಾಗಿದ್ದು, ಒಳನುಸುಳಿರುವ ಪಾಕ್ ವಿಶೇಷ ಪಡೆಯ ಸೈನಿಕರು ದಾರಿಗಳಲ್ಲಿ ಗುರುತಿಸಲಾಗದಂತಹ ಸಣ್ಣ ಸಣ್ಣ ಹಳ್ಳಗಳನ್ನು ತೋಡಿ ಅಲ್ಲಿ ಲ್ಯಾಂಡ್ ಮೈನ್‌ಗಳನ್ನಿಟ್ಟು, ಭಾರತೀಯ ಯೋಧರನ್ನು ಹತ್ಯೆಗೈಯ್ಯಲು ಹೊಂಚುಹಾಕಿದ್ದಾರೆ. ಪಾಕ್ ವಿಶೇಷ ಸೈನಿಕರನ್ನು ಹಿಂಬಾಲಿಸುತ್ತಿರುವ ಭಾರತೀಯ ಯೋಧರಿಗೆ ಇಂತಹ ಲ್ಯಾಂಡ್ ಮೈನ್‌ಗಳು ಗಮನಕ್ಕೆ ಬಂದಿದ್ದು, ತಜ್ಞರ ನೆರವಿನಿಂದ ಅವುಗಳನ್ನು ತೆರವುಗೊಳಿಸುವ ಕಾರ್ಯ ಭರದಿಂದ ಸಾಗಿದೆ.

ಇದೇ ಕಾರಣಕ್ಕಾಗಿ ಕೇರಾನ್ ಸೆಕ್ಟರ್‌ನ ಕಾರ್ಯಾಚರಣೆಗಾಗಿ ಭಾರತೀಯ ಸೇನೆ ತನ್ನ ವಿಶೇಷ ಕಮಾಂಡೊ ಪಡೆಗಳನ್ನು ನಿಯೋಜಿಸಿದೆ. ಕಾರ್ಗಿಲ್ ನಂತರ ಇದೇ ಮೊದಲ ಬಾರಿಗೆ ಪಾಕ್ ಸೇನೆ ದೊಡ್ಡ ಪ್ರಮಾಣದಲ್ಲಿ ಭಾರತೀಯ ಗಡಿಯೊಳಕ್ಕೆ ನುಸುಳಿದ್ದು, ಒಳ ನುಸುಳುಕೋರರನ್ನು ಹತ್ತಿಕ್ಕಲು ಭಾರತೀಯ ಸೇನೆ ಕ್ಷಿಪ್ರಕಾರ್ಯಾಚರಣೆ ನಡೆಸುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement