ತಾರಕಕ್ಕೇರಿದ ಅಖಂಡಾಂಧ್ರ ಹೋರಾಟ: ಕಂಡಲ್ಲಿ ಗುಂಡು ಆದೇಶ
ಸತತ ಎರಡು ದಿನಗಳಿಂದ ನಡೆಯುತ್ತಿರುವ ಅಖಂಡ ಆಂಧ್ರ ಹೋರಾಟ ತಾರಕಕ್ಕೇರಿದ್ದು, ವಿಶಾಖಪಟ್ಟಣದಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ.
ಹೈದರಾಬಾದ್: ಸತತ ಎರಡು ದಿನಗಳಿಂದ ನಡೆಯುತ್ತಿರುವ ಅಖಂಡ ಆಂಧ್ರ ಹೋರಾಟ ತಾರಕಕ್ಕೇರಿದ್ದು, ವಿಶಾಖಪಟ್ಟಣದಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ.
ಇತ್ತ ಹೈದರಾಬಾದ್‌ನಲ್ಲಿ ವೈಎಸ್‌ಆರ್ ಕಾಂಗ್ರೆಸ್ ಮುಖಂಡ ಜಗನ್ ಮೋಹನ್ ರೆಡ್ಡಿ ಅವರು ಅಖಂಡ ಆಂಧ್ರಪ್ರದೇಶಕ್ಕಾಗಿ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರೆ, ಅತ್ತ ವಿಶಾಖಪಟ್ಟಣ ಜಿಲ್ಲೆಯಲ್ಲಿ ಅಖಂಡ ಆಂಧ್ರ ಹೋರಾಟಗಾರರು ನಡೆಸುತ್ತಿರುವ ಹೋರಾಟ ಹಿಂಸಾಚಾರಕ್ಕೆ ತಿರುಗಿದೆ. ವಿಶಾಖ ಪಟ್ಟಣ ಜಿಲ್ಲೆಯ ವಿಜಯನಗರಂನಲ್ಲಿ ಪ್ರತಿಭಟನಾಕಾರರು ಹಿಂಸಾಚಾರಕ್ಕಿಳಿದಿದ್ದು, ಪರಿಸ್ಥಿತಿ ನಿಯಂತ್ರಣಕ್ಕಾಗಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಇದೀಗ ಘಟನಾ ಪ್ರದೇಶದಲ್ಲಿ ಕಫ್ಯೂ ಜಾರಿ ಮಾಡಲಾಗಿದ್ದು, ಕಂಡಲ್ಲಿ ಗುಂಡು ಆದೇಶ ಜಾರಿ ಮಾಡಲಾಗಿದೆ. ಕೊತ್ತ ಪೇಟಾ ಪ್ರದೇಶದಲ್ಲಿ ಪೊಲೀಸರು ರಬ್ಬರ್ ಗುಂಡುಗಳನ್ನು ಬಳಕೆ ಮಾಡಿ ಪ್ರತಿಭಟನಾ ನಿರತರನ್ನು ಚುದುರಿಸಲು ಯತ್ನಿಸುತ್ತಿದ್ದಾರೆ. ಅಂತೆಯೇ ಅದೇ ನಗರದ ಪಲ್ಲಿವೀದಿ ಪ್ರದೇಶದಲ್ಲಿ ಪೊಲೀಸರತ್ತ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದು, 4 ಪೊಲೀಸರು ತೀವ್ರವಾಗಿ ಗಾಯಗೊಂಡಿದ್ದಾರೆ.
ಆಂಧ್ರ ಪ್ರದೇಶ ಕಾಂಗ್ರೆಸ್ ಮುಖಂಡ ಬೋತ್ಸಾ ಸತ್ಯನಾರಾಯಣ ರಾವ್ ಅವರ ಕುಟುಂಬದ ಒಡೆತನವಿರುವ ಸತ್ಯನ ಇಂಜಿನಿಯಂರಿಂಗ್ ಕಾಲೇಜು ವಿಶಾಖಪಟ್ಟಣ ಜಿಲ್ಲೆಯಲ್ಲಿದ್ದು, ಇದೇ ಕಾಲೇಜನ್ನು ಪ್ರತಿಭಟನಾಕಾರರು ಗುರಿಯಾಗಿಸಿಕೊಂಡು ಕಲ್ಲು ತೂರಾಟ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಈ ವರೆಗೂ ನೂರಾರು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದರೂ ಕೂಡ ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ಸಾಧ್ಯವಾಗಿಲ್ಲ. ಹೀಗಾಗಿ ವಿಶಾಖ ಪಟ್ಟಣದ ಕೆಲವು ಪ್ರದೇಶಗಳಲ್ಲಿ ಮಾತ್ರ ಹೇರಲಾಗಿರುವ ಕರ್ಫ್ಯೂವನ್ನು ನಗರದಾದ್ಯಂತ ವಿಸ್ತರಿಸಲು ಪೊಲೀಸ್ ಇಲಾಖೆ ಚಿಂತಿಸುತ್ತಿದೆ.
ಒಟ್ಟಾರೆ ಆಂಧ್ರ ಪ್ರದೇಶವನ್ನು ವಿಭಜಿಸಿ ನೂತನ ತೆಲಂಗಾಣ ರಾಜ್ಯ ರಚಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಸೀಮಾಂಧ್ರದ ಜನತೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ತಮ್ಮ ವಿರೋಧದ ನಡುವೆಯೂ ಕೇಂದ್ರ ಸಚಿವ ಸಂಪುಟ ತೆಲಂಗಾಣ ರಾಜ್ಯ ಕರಡುಪ್ರತಿ ರಚನೆಗೆ ಅನುಮೋದನೆ ನೀಡಿರುವುದು ಸೀಮಾಂಧ್ರ ಪ್ರತಿಭಟನಾಕಾರರನ್ನು ರೊಚ್ಚಿಗೆಬ್ಬಿಸಿದೆ.