ಬಡವರ ರಕ್ಷಣೆಗೆ ಆಹಾರ ಭದ್ರತೆ: ಥಾಮಸ್
ಬೆಲೆ ಏರಿಕೆಯಿಂದ ಬಡವರನ್ನು ರಕ್ಷಿಸಲೆಂದೇ ಕೇಂದ್ರ ಸರ್ಕಾರ ಆಹಾರ ಭದ್ರತಾ ಮಸೂದೆಯನ್ನು ಜಾರಿಗೆ ತಂದಿದೆ ಎಂದು ಕೇಂದ್ರ ಆಹಾರ ಸಚಿವ ಕೆವಿ ಥಾಮಸ್ ಹೇಳಿದ್ದಾರೆ.
ನವದೆಹಲಿ: ಬೆಲೆ ಏರಿಕೆಯಿಂದ ಬಡವರನ್ನು ರಕ್ಷಿಸಲೆಂದೇ ಕೇಂದ್ರ ಸರ್ಕಾರ ಆಹಾರ ಭದ್ರತಾ ಮಸೂದೆಯನ್ನು ಜಾರಿಗೆ ತಂದಿದೆ ಎಂದು ಕೇಂದ್ರ ಆಹಾರ ಸಚಿವ ಕೆವಿ ಥಾಮಸ್ ಹೇಳಿದ್ದಾರೆ.
ಆಹಾರೋತ್ಪನ್ನಗಳ ಬೆಲೆ ಏರಿಕೆ ಕುರಿತು ನವದೆಹಲಿಯಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದ ಥಾಮಸ್ ಅವರು, ಆಹಾರ ಭದ್ರತಾ ಮಸೂದೆಯಿಂದ ದೇಶದ ಶೇ.67 ರಷ್ಟು ಮಂದಿಯ ಹಸಿವು ನೀಗಲಿದೆ ಎಂದು ಹೇಳಿದರು.
'ಬೆಲೆ ಏರಿಕೆಯಿಂದ ನಿತ್ಯ ಸಂಕಷ್ಟಕ್ಕೀಡಾಗುತ್ತಿರುವ ಕಡುಬಡವರನ್ನು ರಕ್ಷಿಸಲು ಭಾರತ ಸರ್ಕಾರ ಈ ಮಸೂದೆಯನ್ನು ಜಾರಿಗೆ ತಂದಿದ್ದು, ಮಸೂದೆ ಜಾರಿಯಿಂದ ದೇಶದ ಶೇ.67ರಷ್ಟು ಬಡವರು ಸಂಕಷ್ಟದಿಂದ ಪಾರಾಗಲಿದ್ದಾರೆ. ಈ ಮೂಲಕ ಅವರಿಗೆ ಕಡಿಮೆ ಬೆಲೆಯಲ್ಲಿ ಆಹಾರೋತ್ಪನ್ನಗಳು ದೊರೆಯಲಿವೆ. ಆಹಾರದ ಹಕ್ಕಿನಿಂದ ದೇಶದ ಎಲ್ಲ ಪ್ರಜೆಗಳಿಗೂ ಆಹಾರ ಪಡೆಯುವ ಹಕ್ಕು ಪ್ರಾಪ್ತವಾಗಿದ್ದು, ಆರೋಗ್ಯಕರ ಮತ್ತು ಚಿಂತೆರಹಿತ ಜೀವನ ಸಾಗಿಸಲು ಇದು ಅನುಕೂಲಕರವಾಗಿದೆ' ಎಂದು ಥಾಮಸ್ ಹೇಳಿದರು.
ಅಂತೆಯೇ ವಿಶ್ವ ಆಹಾರ ಭದ್ರತೆ ಕುರಿತು ಮಾತನಾಡಿದ ಥಾಮಸ್, ಭಾರತದ ಆಹಾರ ಭದ್ರತಾ ವಿಧಾನ ಒಂದು ಮಾದರಿ ವಿಧಾನವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.