ಪಂದ್ಯ ಗೆದ್ದರೆ ಕಾರ್ ನೀಡುವುದಾಗಿ ದಾವೂದ್ ಹೇಳಿದ್ದ: ವೆಂಗ್ಸರ್ಕರ್
1986ರ ಏಷ್ಯಾಕಪ್ ಫೈನಲ್ ನಲ್ಲಿ ಪಾಕ್ ತಂಡವನ್ನು ಸೋಲಿಸಿದರೆ ಭಾರತ ತಂಡಕ್ಕೆ ಕಾರನ್ನು ನೀಡುತ್ತೇನೆ ಎಂದು ದಾವೂದ್ ಇಬ್ರಾಹಿಂ ಹೇಳಿದ್ದ ಎಂದು ಮಾಜಿ ಕ್ರಿಕೆಟಿಗ ದಿಲೀಪ್ ವೆಂಗ್ಸರ್ಕರ್ ಹೇಳಿದ್ದಾರೆ.
ನವದೆಹಲಿ: 1986ರ ಏಷ್ಯಾಕಪ್ ಸರಣಿಯಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿದರೆ ಭಾರತ ತಂಡದ ಪ್ರತಿಯೊಬ್ಬ ಆಟಗಾರನಿಗೂ ಕಾರನ್ನು ಬಹುಮಾನವಾಗಿ ನೀಡುತ್ತೇನೆ ಎಂದು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹೇಳಿದ್ದ ಎಂದು ಮಾಜಿ ಕ್ರಿಕೆಟಿಗ ದಿಲೀಪ್ ವೆಂಗ್ಸರ್ಕರ್ ಹೇಳಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ವೆಂಗ್ಸರ್ಕರ್, 1986ರಲ್ಲಿ ಶಾರ್ಜಾದಲ್ಲಿ ನಡೆದ ಏಷ್ಯಾಕಪ್ ಸರಣಿಯ ಫೈನಲ್ ಪಂದ್ಯಕ್ಕೂ ಮುನ್ನ ನಮ್ಮ ಡ್ರೆಸಿಂಗ್ ಕೊಠಡಿಗೆ ಆಗಮಿಸಿದ್ದ ದಾವೂದ್, ತನ್ನನ್ನು ಉದ್ಯಮಿ ಎಂದು ಪರಿಚಯಿಸಿಕೊಂಡಿದ್ದ. ಅಂದು ನಮಗೆ ದಾವೂದ್ ಮುಖ ಪರಿಚಯವಿಲ್ಲದ ಕಾರಣ, ಅವನು ಉದ್ಯಮಿಯೆಂದೇ ಎಲ್ಲರೂ ಭಾವಿಸಿದ್ದೆವು. ಅಂದು ಆತ ಫೈನಲ್ ಪಂದ್ಯದಲ್ಲಿ ನೀವು ಪಾಕಿಸ್ತಾನ ತಂಡವನ್ನು ಸೋಲಿಸಿದರೆ ನಿಮ್ಮ ತಂಡದ ಎಲ್ಲ ಆಟಗಾರರಿಗೂ ಟೊಯೋಟಾ ಕರೋಲಾ ಕಾರನ್ನು ಉಡುಗೊರೆಯಾಗಿ ನೀಡುವುದಾಗಿ ಹೇಳಿದ್ದ.
ಅದೇ ವೇಳೆಗೆ ಕೋಠಡಿಗೆ ಆಗಮಿಸಿದ ಕಪಿಲ್ ದೇವ್, ದಾವೂದ್ ಯಾರೆಂದು ವಿಚಾರಿಸಿ ಹೀಗೆಲ್ಲಾ ಅಪ್ಪಣೆ ಇಲ್ಲದೆ ಡ್ರೆಸಿಂಗ್ ಕೊಠಡಿಗೆ ಬರಬಾರದು ಎಂದು ಕೂಡಲೇ ಆತನನ್ನು ಹೊರಗೆ ಕಳುಹಿಸಿದ್ದರು. ಅಲ್ಲದೆ ಆತನ ಪ್ರಸ್ತಾಪದ ಕುರಿತು ಕೋಪಗೊಂಡು ಅವನ ಪ್ರಸ್ತಾಪವವನ್ನು ಖಾರವಾಗಿಯೇ ತಿರಸ್ಕರಿಸಿದ್ದರು. ಕಪಿಲ್ ಕೋಪವನ್ನು ಕಂಡ ದಾವೂದ್ ಕೂಡಲೇ ಹೊರಗೆ ತೆರಳಿದ ಎಂದು ವೆಂಗ್ ಸರ್ಕರ್ ಹೇಳಿದ್ದಾರೆ.
ಸಂದರ್ಶನದಲ್ಲಿ ವೆಂಗ್ಸರ್ಕರ್ ಅವರ ಮಾತಿಗೆ ಧನಿಗೂಡಿಸಿರುವ ಕಪಿಲ್ ದೇವ್ ಅವರು, ಅಂದಿನ ಮಟ್ಟಿಗೆ ನಮಗೆ ದಾವೂದ್ ಯಾರೆಂದು ತಿಳಿದಿರಲಿಲ್ಲ ಎಂದು ಹೇಳಿದ್ದಾರೆ. ಒಟ್ಟಾರೆ ಖಾಸಗಿ ಸುದ್ದಿವಾಹಿನಿಯ ಸಂದರ್ಶನದಲ್ಲಿ ಮಾಜಿ ಹಿರಿಯ ಕ್ರಿಕೆಟಿಗ ವೆಂಗ್ ಸರ್ಕರ್ ಅವರು ಸ್ಫೋಟಕ ಮಾಹಿತಿಯನ್ನು ಹೊರಹಾಕಿದ್ದಾರೆ.