ಪ್ರವಾಹದ ನೀರಿಗೆ ಬಿದ್ದ ಕೇಂದ್ರ ಸಚಿವ ಚಿರಂಜೀವಿ
ಕೇಂದ್ರ ಪ್ರವಾಸೋದ್ಯಮ ಸಚಿವ ಚಿರಂಜೀವಿ ಅವರು ಆಂಧ್ರ ಪ್ರದೇಶದ ಪ್ರವಾಹ ಪೀಡಿತ ಪ್ರದೇಶಕ್ಕೆ..
ಹೈದರಾಬಾದ್: ಕೇಂದ್ರ ಪ್ರವಾಸೋದ್ಯಮ ಸಚಿವ ಚಿರಂಜೀವಿ ಅವರು ಆಂಧ್ರ ಪ್ರದೇಶದ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ವೇಳೆ ಆಯತಪ್ಪಿ ಪ್ರವಾಹದ ನೀರಿಗೆ ಬಿದ್ದ ಘಟನೆ ನಡೆದಿದೆ.
ಸತತ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಆಂಧ್ರದ ಬಹುತೇಕ ಪ್ರದೇಶಗಳು ಪ್ರವಾಹಕ್ಕೆ ತುತ್ತಾಗಿದ್ದು, ನಿನ್ನೆ ಕೇಂದ್ರ ಸಚಿವ ಚಿರಂಜೀವಿ, ಆಂಧ್ರಪ್ರದೇಶ ಸಚಿವ ತೋಟಾ ನರಸಿಂಹಮ್ ಮತ್ತು ಸ್ಥಳೀಯ ಶಾಸಕರಾದ ಕೊತ್ತಪಲ್ಲಿ ಸುಬ್ಬಾರಾವ್ ಅವರು ಪ್ರವಾಹ ಪೀಡಿತ ಪ್ರದೇಶದಲ್ಲಿ ವೀಕ್ಷಣೆ ನಡೆಸಿದ್ದರು.
ಕಾಕಿನಾಡ ಜಿಲ್ಲೆಯ ಆಂಜನೇಯನಗರದಲ್ಲಿ ವೀಕ್ಷಣೆಗೆಂದು ಬೋಟ್‌ನಲ್ಲಿ ತೆರಳಿದ್ದ ಚಿರಂಜೀವಿ, ಆಯತಪ್ಪಿ ನೀರಿಗೆ ಬಿದ್ದಿದ್ದಾರೆ. ತಕ್ಷಣವೇ ಜಾಗರೂಕರಾದ ರಕ್ಷಣಾ ಸಿಬ್ಬಂದಿಗಳು ಅವರನ್ನು ಮೇಲಕ್ಕೆ ಎತ್ತುವ ಮೂಲಕ ಅವರನ್ನು ಪ್ರಾಣಾಪಾಯದಿಂದ ಪಾರುಮಾಡಿದ್ದಾರೆ. ನಂತರ ಚಿರಂಜೀವಿ ಅವರು ಶಾಸಕ ಶೇಷರೆಡ್ಡಿ ಅವರ ಮನೆಗೆ ತೆರಳಿ ಕೆಲಹೊತ್ತು ವಿಶ್ರಾಂತಿ ಪಡೆದಿದ್ದರು.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಒಡಿಶಾ ಮತ್ತು ಆಂಧ್ರ ಪ್ರದೇಶ ರಾಜ್ಯಗಳಲ್ಲಿ ಕಳೆದ ಹಲವು ದಿನಗಳಿಂದ ಸತತ ಮಳೆಯಾಗುತ್ತಿದ್ದು, ಆಂಧ್ರದ ಪಶ್ಚಿಮ ಗೋದಾವರಿ ಜಿಲ್ಲೆಯ ಬಹುತೇಕ ಪ್ರದೇಶಗಳು ಜಾಲಾವೃತಗೊಂಡಿವೆ. ಅಲ್ಲದೆ ಆಂಧ್ರ ಪ್ರದೇಶದ ಹಲವು ಪ್ರದೇಶಗಳು ಪ್ರವಾಹ ಪೀಡಿತವಾಗಿದ್ದು, ರಾಜ್ಯದಲ್ಲಿ ಮಳೆಗೆ ಬಲಿಯಾದವರ ಸಂಖ್ಯೆ 53ಕ್ಕೇರಿದೆ.