ಮೋದಿ ಕೆಂಪುಕೋಟೆ ಕನಸು ಕನಸಾಗಿಯೇ ಉಳಿಯಲಿದೆ: ನಿತೀಶ್
ಕೆಂಪು ಕೋಟೆ ಏರುವ ಕನಸು ಕಾಣುತ್ತಿರುವ ಮೋದಿ ಅವರ ಕನಸು ಕನಸಾಗಿಯೇ ಉಳಿಯಲಿದೆ ಎಂದು ಬಿಹಾರ..
ರಾಜಗಿರ್: ಪ್ರಧಾನ ಮಂತ್ರಿಯಾಗಿ ಕೆಂಪು ಕೋಟೆ ಏರುವ ಕನಸು ಕಾಣುತ್ತಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಕನಸು ಕನಸಾಗಿಯೇ ಉಳಿಯಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
ಬಿಹಾರದ ರಾಜಗಿರ್‌ನಲ್ಲಿ ಜೆಡಿಯು ಚಿಂತನ ಶಿಬಿರದಲ್ಲಿ ಪಾಲ್ಗೊಂಡಿದ್ದ ನಿತೀಶ್ ಕುಮಾರ್ ಅವರು, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಪಾಟ್ನಾದಲ್ಲಿ ನಡೆದ 'ಹೂಂಕಾರ್' ರ್ಯಾಲಿಯ ಹಿನ್ನಲೆಯಲ್ಲಿ ಬಿಜೆಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಅವರು, '17 ವರ್ಷಗಳಿಂದ ಜೆಡಿಯು ಎನ್‌ಡಿಎ ಮೈತ್ರಿಕೂಟದ ಭಾಗವಾಗಿತ್ತು. ಆದರೆ ಬಿಜೆಪಿಗೆ ಜೆಡಿಯುನ ಅವಶ್ಯಕತೆ ಇಲ್ಲ. ಹೀಗಾಗಿ ನಾವು ಮೈತ್ರಿಕೂಟದಿಂದ ಹೊರಬಂದಿದ್ದೇವೆ'.
'ರ್ಯಾಲಿಯಲ್ಲಿ ಅವರು (ನರೇಂದ್ರ ಮೋದಿ) ಬಳಸಿದ ಭಾಷೆಯನ್ನು ಗಮನಿಸಿದರೆ ಪಾಟ್ನಾ ರ್ಯಾಲಿ ಸೊಕ್ಕಿನ ಪ್ರತೀಕವಾಗಿದೆ. ಬಿಜೆಪಿಯಲ್ಲಿ ಈ ಹಿಂದಿನ ಸತ್ವ ಉಳಿದುಕೊಂಡಿಲ್ಲ. ಈ ಮೊದಲೇ ನಾನು ಅಡ್ವಾಣಿ ಅವರನ್ನು ಭೇಟಿ ಮಾಡಿ ನಿಮ್ಮ ಮಾತನ್ನು ಯಾರು ಗೌರವಿಸುವುದಿಲ್ಲ ಎಂದು ಹೇಳಿದ್ದೆ. ಇದೀಗ ಅದೇ ನಡೆಯುತ್ತಿದೆ'.
ಗುಜರಾತಿಗಳಿಗೆ ಐಸ್ ಕ್ರೀಂ ಇಷ್ಟ ಎಂದು ನಾನು ಕೇಳಿದ್ದೇನೆ. ಆದರೆ ಅದರಲ್ಲಿರುವ ಸಿಹಿ ಅವರ ಮಾತಿನಲ್ಲಿ ಇಲ್ಲ. ದೇಶದ ಅತ್ಯುನ್ನತ ಸ್ಥಾನವನ್ನು ಅಲಂಕರಿಸಲು ಮುಂದಾಗಿರುವ ವ್ಯಕ್ತಿ ಬಹುಶಃ ರೋಗಿಯಾಗಿರಬೇಕು. ದೇಶದ ಜನತೆ ತಮ್ಮ ನಾಯಕನನ್ನು ಆರಿಸುವಾಗ ಜಾಣ್ಮೆ ಮೆರೆಯಬೇಕು ಎಂದು ನಿತೀಶ್ ಹೇಳಿದರು.
ಅಂತೆಯೇ ಮೋದಿ ರ್ಯಾಲಿಗೂ ಮುನ್ನ ನಡೆದ ಬಾಂಬ್ ದಾಳಿ ಕುರಿತು ಸ್ಪಷ್ಟನೆ ನೀಡಿರುವ ನಿತೀಶ್ ಕುಮಾರ್ ಅವರು, ಉಗ್ರರ ಕೃತ್ಯವನ್ನು ತೀವ್ರವಾಗಿ ಖಂಡಿಸಿದರು. ಅಲ್ಲದೆ ಮುಂದೆ ಮೋದಿ ಪಾಲ್ಗೊಳ್ಳುವ ರ್ಯಾಲಿಗಳಿಗೆ ಅವಶ್ಯಕ ಭದ್ರತೆ ಒದಗಿಸಲಾಗುವುದು ಎಂದು ನಿತೀಶ್ ತಿಳಿಸಿದರು.