ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸಾಧು ಕನಸು ಭಗ್ನ: ಸಿಕ್ಕಿದ್ದು ಹೊನ್ನಲ್ಲ ಮಣ್ಣು!

ಸಾಧು ಶೋಭನ್ ಸರ್ಕಾರ್ ಅವರ ಕನಸು ಭಗ್ನಗೊಂಡಿದ್ದು, ದೇವಾಲಯದ ಅವರಣದಲ್ಲಿ ಯಾವುದೇ ಚಿನ್ನದ ನಿಧಿ ಇಲ್ಲ ಎಂದು ಪುರಾತತ್ವ ಇಲಾಖೆ ಸ್ಪಷ್ಟಪಡಿಸಿದೆ.

Srinivasa Murthy VN
Updated On : 29 Oct 2013, 2:14 am

ಉನ್ನಾವ್(ಯುಪಿ): ಸಾಧು ಶೋಭನ್ ಸರ್ಕಾರ್ ಅವರ ಕನಸು ಭಗ್ನಗೊಂಡಿದ್ದು, ದೇವಾಲಯದ ಅವರಣದಲ್ಲಿ ಯಾವುದೇ ಚಿನ್ನದ ನಿಧಿ ಇಲ್ಲ ಎಂದು ಭಾರತೀಯ ಪುರಾತತ್ವ ಇಲಾಖೆ ಮಂಗಳವಾರ ಸ್ಪಷ್ಟಪಡಿಸಿದೆ.

ಉತ್ತರ ಪ್ರದೇಶದ ಉನ್ನಾವ್ ಪ್ರದೇಶದ ದೌಂಡಿಯಾಕಲಾದಲ್ಲಿರುವ ರಾಜಾರಾವ್ ರಾಮ ಬಕ್ಸ್ ಸಿಂಗ್ ಕೋಟೆಯ ಆವರಣದಲ್ಲಿರುವ ಇತಿಹಾಸ ಪ್ರಸಿದ್ಧ ದೇವಾಲಯದ ಕೆಳಗೆ ಸಾವಿರ ಟನ್ ಚಿನ್ನವಿರುವುದಾಗಿ ಸಾಧು ಶೋಭನ್ ಸರ್ಕಾರ್ ಅವರು ತಿಳಿಸಿದ್ದರು. ಅವರ ಕನಸಿನಲ್ಲಿ ದೇವಾಲಯದ ಕೆಳಗೆ ಸಾವಿರ ಟನ್ ಚಿನ್ನದ ನಿಧಿ ಇರುವ ಕುರಿತು ಶೋಭನ್ ಸರ್ಕಾರಕ್ಕೆ ತಿಳಿಸಿದ್ದರು. ಇದನ್ನೇ ನಂಬಿಕೊಂಡ ಕೇಂದ್ರ ಸರ್ಕಾರ ದೇವಾಲಯದ ಆವರಣದಲ್ಲಿ ಉತ್ಖನನ ಕಾರ್ಯ ನಡೆಸುವಂತೆ ಪುರಾತತ್ವ ಇಲಾಖೆಯ ಉಪ ನಿರ್ದೇಶಕ ಕೆ ಮಿಶ್ರಾ ಅವರ ನೇತೃತ್ವದಲ್ಲಿ ತಂಡವನ್ನು ರಚಿಸಿ ವರದಿ ನೀಡುವಂತೆ ಸೂಚಿಸಿತ್ತು.

ಸರ್ಕಾರದ ಸೂಚನೆಯಂತೆ ಅಕ್ಟೋಬರ್ 18ರಂದು ಉತ್ಖನನ ಕಾರ್ಯ ಆರಂಭಿಸಿದ ಈ ತಂಡ ಇಂದು ತನ್ನ ಕಾರ್ಯ ಪೂರ್ಣಗೊಳಿಸಿದ್ದು, ದೇವಾಲಯದ ಆವರಣದಲ್ಲಿ ಯಾವುದೇ ಚಿನ್ನದ ನಿಧಿ ಇಲ್ಲ ಎಂದು ಸ್ಪಷ್ಟಪಡಿಸಿದೆ.

ತೀವ್ರ ಕುತೂಹಲ ಹುಟ್ಟಿಸಿದ್ದ ಸಾಧು ಶೋಭನ್ ಸರ್ಕಾರ್ ಅವರ ಕನಸಿನ ಪ್ರಸಂಗ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಘಟನೆ ಸಂಬಂಧ ಕೇಂದ್ರ ತೆಗೆದುಕೊಂಡ ನಿರ್ಧಾರಗಳ ಕುರಿತಾಗಿಯೂ ವಿರೋಧ ಪಕ್ಷಗಳಿಂದ ಹಲವು ಟೀಕೆ ಟಿಪ್ಪಣಿಗಳು ಹರಿದು ಬಂದಿದ್ದವು. ಬಿಜೆಪಿ ಪ್ರಧಾನಿ ಅಭ್ಯರ್ಥಿ ಮತ್ತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಕೇಂದ್ರದ ವಿರುದ್ಧ ಮಾತನಾಡುವ ರಭಸದಲ್ಲಿ ಸಾಧು ಶೋಭನ್ ಅವರ ಕನಸನ್ನೇ ಪ್ರಶ್ನಿಸಿ ಟೀಕೆಗೆ ಗುರಿಯಾಗಿದ್ದರು. ನಂತರ ತಮ್ಮ ಟ್ವೀಟರ್ ಖಾತೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು.

ಇದೀಗ ಈ ಕನಸಿನ ಪ್ರಹಸನಕ್ಕೆ ಸಂಪೂರ್ಣ ಬ್ರೇಕ್ ಬಿದ್ದಿದ್ದು, ದೇವಾಲಯದ ಆವರಣದಲ್ಲಿ ಚಿನ್ನ ಇಲ್ಲ ಎನ್ನುವ ಮೂಲಕ ಪುರಾತತ್ವ ಇಲಾಖೆ ಸಾಧು ಶೋಭನ್ ಅವರ ಕನಸನ್ನು ಭಗ್ನಗೊಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement