'ಸೈಕೋ' ಸುಳಿವು ನೀಡಿದವರಿಗೆ 5 ಲಕ್ಷ: ಜಾರ್ಜ್
ಪರಾರಿಯಾಗಿರುವ 'ಸೈಕೋ ಕಿಲ್ಲರ್' ಜೈಶಂಕರ್ ಕುರಿತು ಸುಳಿವು ನೀಡಿದವರಿಗೆ 5 ಲಕ್ಷ ರು. ಬಹುಮಾನ ನೀಡುವುದಾಗಿ ಜಾರ್ಜ್ ಹೇಳಿದ್ದಾರೆ.
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಪರಾರಿಯಾಗಿರುವ 'ಸೈಕೋ ಕಿಲ್ಲರ್' ಜೈಶಂಕರ್ ಕುರಿತು ಸುಳಿವು ನೀಡಿದವರಿಗೆ ಸರ್ಕಾರದ ಪರವಾಗಿ 5 ಲಕ್ಷ ರುಪಾಯಿ ಬಹುಮಾನ ನೀಡುವುದಾಗಿ ಗೃಹ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಜಾರ್ಜ್ ಅವರು, 'ಸೈಕೋ ಕಿಲ್ಲರ್ ಜೈಶಂಕರ್ನ ಪರಾರಿ ಪ್ರಕರಣದಲ್ಲಿ ಮೇಲ್ನೋಟಕ್ಕೆ ಭದ್ರತಾ ಲೋಪ ಕಾಣುತ್ತಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳನ್ನು ಮತ್ತು ಜೈಲರ್ಗಳನ್ನು ಅಮಾನತು ಮಾಡಲಾಗಿದೆ. ಅಲ್ಲದೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಪಟ್ನಾಯಕ್ ಅವರ ನೇತೃತ್ವದ ತಂಡಕ್ಕೆ ತನಿಖೆ ಹೊಣೆಯನ್ನು ಹೊರಿಸಲಾಗಿದೆ. ಅಂತೆಯೇ 'ಸೈಕೋ ಕಿಲ್ಲರ್' ಕುರಿತು ಸುಳಿವು ನೀಡಿದವರಿಗೆ ಸರ್ಕಾರದ ಪರವಾಗಿ 5 ಲಕ್ಷ ರುಪಾಯಿಯನ್ನು ಬಹುಮಾನವಾಗಿ ನೀಡಲಾಗುತ್ತದೆ' ಎಂದು ಹೇಳಿದರು.
ಭಾರಿ ಭದ್ರತೆ ಹೊಂದಿರುವ ಕೆಲವೇ ಜೈಲುಗಳ ಪೈಕಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಕೂಡ ಒಂದು. ಇಂತಹ ಜೈಲಿನಿಂದಲೇ ಅಪರಾಧಿಯೊಬ್ಬ ಪರಾರಿಯಾಗುರುವುದು ಅಚ್ಚರಿ ಮೂಡಿಸಿದೆ. ಪ್ರಕರಣದಲ್ಲಿ ಮೇಲ್ನೋಟಕ್ಕೆ ಭದ್ರತಾ ಲೋಪ ಕಂಡು ಬಂದಿದ್ದರೂ, ಪರಾರಿ ಪ್ರಕರಣದಲ್ಲಿ ಜೈಶಂಕರ್ಗೆ ಜೈಲು ಸಿಬ್ಬಂದಿಗಳು ಸಹಾಯ ಮಾಡಿರುವ ಕುರಿತು ಅನುಮಾನಗಳು ಮೂಡಿವೆ.