ಉಗ್ರ 'ತುಂಡಾ' ಪೊಲೀಸ್ ಕಸ್ಟಡಿ 5 ದಿನ ವಿಸ್ತರಣೆ
ನವದೆಹಲಿ: ಮೋಸ್ಟ್ ವಾಂಟೆಡ್ ಉಗ್ರ ಅಬ್ದುಲ್ ಕರೀಂ ತುಂಡಾನ ಪೊಲೀಸ್ ಬಂಧನ ಅವಧಿಯನ್ನು ನ್ಯಾಯಾಲಯ ಮತ್ತೆ ಐದು ದಿನಗಳಿಗೆ ವಿಸ್ತರಿಸಿದೆ.
ಭೂಗತ ಪಾತಕಿ ದಾವೂಜ್ ಇಬ್ರಾಹಿಂ ಬಲಗೈ ಭಂಟ ಮತ್ತು ಮೋಸ್ಟ್ ವಾಂಟೆಡ್ ಉಗ್ರ ಅಬ್ದುಲ್ ಕರೀಂ ತುಂಡಾ ಪೊಲೀಸ್ ಕಸ್ಟಡಿಯನ್ನು ದೆಹಲಿ ವಿಶೇಷ ನ್ಯಾಯಾಲಯ ಸೆಪ್ಟೆಂಬರ್ 8ರವರೆಗೆ ವಿಸ್ತರಿಸಿದೆ. ಭಾರತ ಮತ್ತು ನೇಪಾಳ ಗಡಿಯಲ್ಲಿ ದೆಹಲಿ ವಿಶೇಷ ಪೊಲೀಸರಿಗೆ ಸೆರೆ ಸಿಕ್ಕಿದ್ದ ಉಗ್ರ ತುಂಡಾನನ್ನು ನ್ಯಾಯಾಲಯ 3 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿತ್ತು.
ಉಗ್ರ ತುಂಡಾನ ಬಂಧನ ಅವಧಿ ಇಂದಿಗೆ ಮುಕ್ತಾಯವಾದ ಹಿನ್ನಲೆಯಲ್ಲಿ ಪೊಲೀಸರು ತುಂಡಾನನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರು. ಅಲ್ಲದೆ ಹೆಚ್ಚಿನ ವಿಚಾರಣೆಗಾಗಿ ಆತನನ್ನು ಮತ್ತೆ ತಮ್ಮ ವಶಕ್ಕೆ ನೀಡಬೇಕು ಎಂದು ಪೊಲೀಸರು ನ್ಯಾಯಾಲಯದ ಬಳಿ ಮನವಿ ಸಲ್ಲಿಸಿದರು. ದೆಹಲಿ ವಿಶೇಷ ಪೊಲೀಸರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ತುಂಡಾನನ್ನು ಮತ್ತೆ ಐದು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ.
ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಬಲಗೈ ಬಂಟನಾಗಿದ್ದ ತುಂಡಾ, ಎಲ್ಇಟಿ ಸಂಘಟನೆಯಲ್ಲಿ ಬಾಂಬ್ಗಳನ್ನು ಸಿದ್ಧಪಡಿಸುವುದರಲ್ಲಿ ಪರಿಣಿತನಾಗಿದ್ದ. ಸುಮಾರು 40ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿರುವ ತುಂಡಾ, 2001ರ ಸಂಸತ್ ಮೇಲಿನ ದಾಳಿ, 1996-98ರಲ್ಲಿ ಇಂಡೋ ನೇಪಾಳ ಗಡಿಯಲ್ಲಿ ನಡೆದ ಸರಣಿ ಸ್ಫೋಟ, 26/11 ಮುಂಬೈ ದಾಳಿ ಪ್ರಕರಣದ ಪ್ರಮುಖ ರೂವಾರಿ ಜಮಾತ್ ಉದ್ ದವಾ ಮುಖ್ಯಸ್ಥ ಹಫೀಜ್ ಮಹಮದ್ ಸೈಯ್ಯದ್ನೊಂದಿಗೂ ಈತನಿಗೆ ನಂಟಿತ್ತು ಎಂದು ಪೊಲೀಸ್ ವಿಚಾರಣೆಯಿಂದ ತಿಳಿದು ಬಂದಿದೆ.