ಮತ್ತೆ ರುಪಾಯಿ ಮೌಲ್ಯ ಕುಸಿತ: ಚಿನ್ನದ ಬೆಲೆ ಗಗನಕ್ಕೆ
ಡಾಲರ್ ಎದುರು ರುಪಾಯಿ ಮೌಲ್ಯ ಮತ್ತೆ ಭಾರಿ ಕುಸಿತಗೊಂಡಿದ್ದು, ಪ್ರತಿ ಡಾಲರ್‌ನ ಬೆಲೆ 68 ರುಪಾಯಿಗಳಿಗೇರಿದೆ.
ನವದೆಹಲಿ: ಡಾಲರ್ ಎದುರು ರುಪಾಯಿ ಮೌಲ್ಯ ಮತ್ತೆ ಭಾರಿ ಕುಸಿತಗೊಂಡಿದ್ದು, ಪ್ರತಿ ಡಾಲರ್‌ನ ಬೆಲೆ 68 ರುಪಾಯಿಗಳಿಗೇರಿದೆ.
ಡಾಲರ್ ಎದುರು ರುಪಾಯಿ ಅಪಮೌಲ್ಯ ಮುಂದುವರೆದಿದ್ದು, ಇಂದು ಮತ್ತೆ ರುಪಾಯಿ ಮೌಲ್ಯ ಭಾರಿ ಕುಸಿತಗೊಳ್ಳುವ ಮೂಲಕ ಪ್ರತಿ ಡಾಲರ್‌ನ ಬೆಲೆ 68 ರುಪಾಯಿಗೇರಿದೆ.
ಕಳೆದ ಹಲವು ದಿನಗಳಿಂದ ಡಾಲರ್ ಎದುರು ರುಪಾಯಿ ಮಂಕಾಗಿದ್ದು, ವಿದೇಶಿ ವಿನಿಮಯದಲ್ಲಿ ಡಾಲರ್‌ಗೆ ಹೆಚ್ಚಾದ ಬೇಡಿಕೆ ಮತ್ತು ರುಪಾಯಿ ಮೇಲೆ ಹೂಡಿಕೆದಾರರು ನಂಬಿಕೆ ಕಳೆದುಕೊಂಡಿರುವುದು ಕೂಡ ರುಪಾಯಿ ಅಪಮೌಲ್ಯಕ್ಕೆ ಕಾರಣ ಎನ್ನಲಾಗುತ್ತಿದೆ.
ಅಲ್ಲದೆ ಷೇರುಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ ಕೂಡ ಭಾರಿ ಪ್ರಮಾಣದ ಅಂಕಗಳನ್ನು ಕಳೆದುಕೊಂಡಿದ್ದು, ಮಾರುಕಟ್ಟೆ ಆರಂಭವಾದ ಕೇವಲ 3 ಗಂಟೆಯ ಅವಧಿಯಲ್ಲಿ ಸೆನ್ಸೆಕ್ಸ್ 700 ಅಂಕಗಳಷ್ಟು ಕುಸಿತಗೊಂಡಿದೆ. ಸಿರಿಯಾದ ಮೇಲೆ ಅಮೆರಿಕ ಕ್ಷಿಪಣಿ ದಾಳಿ ನಡೆಸಿದೆ ಎಂಬ ಸುದ್ದಿ ಪ್ರಸಾರವಾದ ಬಳಿಕ ರುಪಾಯಿ ಮೌಲ್ಯ ಕುಸಿತಗೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಒಂದು ವೇಳೆ ಅಮೆರಿಕ ಸಿರಿಯಾದ ಮೇಲೆ ಯುದ್ಧ ಆರಂಭಿಸಿದ್ದೇ ಆದಲ್ಲಿ, ಭಾರತದ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದೆ ಎಂದು ಆರ್ಥಿಕ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಚಿನ್ನದ ಬೆಲೆ ಮತ್ತೆ ಗಗನಕ್ಕೆ
ಇತ್ತ ರುಪಾಯಿ ಅಪಮೌಲ್ಯ ಮುಂದುವರೆಯುತ್ತಿದ್ದಂತೆಯೇ, ಚಿನ್ನದ ಬೆಲೆ ಕೂಡ ಗಗನಕ್ಕೇರಿದೆ. ಚಿನಿವಾರ ಪೇಟೆಯಲ್ಲಿ ಚಿನ್ನದ ದರ 34 ಸಾವಿರ ಗಡಿ ತಲುಪಿದೆ. ಪ್ರತಿ 10 ಗ್ರಾಂ ಚಿನ್ನದ ದರ 33, 865 ರುಪಾಯಿಗೆ ಏರಿದೆ.
ಕೇಂದ್ರದ ವಿರುದ್ಧ ಬಿಜೆಪಿ ವಾಗ್ದಾಳಿ
ರುಪಾಯಿ ಅಪಮೌಲ್ಯ ಕುಸಿತ ಮುಂದುವರೆದಿರುವಂತೆಯೇ ಪ್ರತಿಪಕ್ಷ ಬಿಜೆಪಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದೆ. ಮಾಧ್ಯಮಗಳೊಂದಿಗೆ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ರಾಜ್‌ನಾಥ್ ಸಿಂಗ್ ಅವರು, ದೇಶದ ಆರ್ಥಿಕ ಸ್ಥಿತಿ ನಿಭಾಯಿಸುವಲ್ಲಿ ಕೇಂದ್ರದ ಯುಪಿಎ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಈಗಿನ ಆರ್ಥಿಕ ಸ್ಥಿತಿ 1991ರ ಸ್ಥಿತಿಗಿಂತಲೂ ಕೆಟ್ಟದಾಗಿದೆ ಎಂದು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.