ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮೈಕ್ರೋಸಾಫ್ಟ್ ಪಾಲಾದ ನೋಕಿಯಾ

ಮೊಬೈಲ್ ಕ್ಷೇತ್ರದ ದಿಗ್ಗಜನಾಗಿದ್ದ ನೋಕಿಯಾ ಮೊಬೈಲ್ ಸಂಸ್ಥೆಯನ್ನು ಮೈಕ್ರೋಸಾಫ್ಟ್ ಸಂಸ್ಥೆ ಭಾರಿ ಮೊತ್ತಕ್ಕೆ ಖರೀದಿಸಿದೆ.

Srinivasa Murthy VN
Updated On : 3 Sept 2013, 3:27 am

ನವದೆಹಲಿ: ಮೊಬೈಲ್ ಕ್ಷೇತ್ರದ ದಿಗ್ಗಜನಾಗಿದ್ದ ನೋಕಿಯಾ ಮೊಬೈಲ್ ಸಂಸ್ಥೆಯನ್ನು ಮೈಕ್ರೋಸಾಫ್ಟ್ ಸಂಸ್ಥೆ ಭಾರಿ ಮೊತ್ತಕ್ಕೆ ಖರೀದಿಸಿದೆ.

ಕಂಪ್ಯೂಟರ್ ಕ್ಷೇತ್ರದ ದಿಗ್ಗಜ ಎಂದೇ ಖ್ಯಾತಿಯಾಗಿರುವ ಮೈಕ್ರೋಸಾಫ್ಟ್ ಸಂಸ್ಥೆ ಸುಮಾರು 7.2 ಮಿಲಿಯನ್ ಡಾಲರ್‌ಗೆ ಮೊಬೈಲ್ ಸಂಸ್ಥೆ ನೋಕಿಯಾವನ್ನು ಖರೀದಿ ಮಾಡಿದೆ. ಫಿನ್‌ಲ್ಯಾಂಡ್ ಮೂಲದ ನೋಕಿಯಾ ಸಂಸ್ಥೆಯನ್ನು ಅಮೆರಿಕ ಮೂಲದ ಮೈಕ್ರೋಸಾಫ್ಟ್ ಸಂಸ್ಥೆ ಖರೀದಿಸಿದ್ದು, ಶೀಘ್ರದಲ್ಲಿಯೇ ಮಾರುಕಟ್ಟೆಗೆ ತನ್ನ ನೂತನ ಸರಣಿಯ ಮೊಬೈಲ್‌ಗಳನ್ನು ಬಿಡುಗಡೆ ಮಾಡುವುದಾಗಿ ಮೈಕ್ರೋಸಾಫ್ಟ್ ಹೇಳಿದೆ.

ಇದೊಂದು ದಿಟ್ಟ ನಡೆಯಾಗಿದ್ದು, ಎರಡೂ ಸಂಸ್ಥೆಗಳ ಗ್ರಾಹಕ, ಸಿಬ್ಬಂದಿಗಳನ್ನು ಮತ್ತು ಅವರ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೈಕ್ರೋಸಾಫ್ಟ್ ನಿರ್ಗಮಿತ ಸಿಇಒ ಸ್ಟೀವ್ ಬಾಲ್ಮರ್ ಹೇಳಿದ್ದಾರೆ.

'ಎರಡು ದಿಗ್ಗಜ ಸಂಸ್ಥೆಗಳು ಒಟ್ಟುಗೂಡಿರುವುದು ಸಂತಸದ ಸುದ್ದಿಯಾಗಿದ್ದು, ಹೂಡಿಕೆದಾರರು ಮತ್ತು ಸಿಬ್ಬಂದಿಗಳ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ದಿಟ್ಟ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ನೂತನ ಸರಣಿಯ ಮೊಬೈಲ್‌ಗಳನ್ನು ಮಾರುಕಟ್ಟೆಗೆ ಪರಿಚಯ ಮಾಡುವ ಮೂಲಕ ಗ್ರಾಹಕರ ನಂಬಿಕೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತೇವೆ ಎಂದು ಬಲ್ಮಾರ್ ಹೇಳಿದರು.

ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳ ಭರಾಟೆ ಹೆಚ್ಚಾದಂತೆ ಸ್ಪರ್ಧೆ ಎದುರಿಸಲಾಗದೇ ನೋಕಿಯಾ ಮಂಕಾಗಿತ್ತು. ಒಂದು ಕಾಲದಲ್ಲಿ ಮೊಬೈಲ್ ಕ್ಷೇತ್ರದಲ್ಲಿ ಅನಭಿಶಕ್ತ ದೊರೆಯಾಗಿದ್ದ ನೋಕಿಯಾ ಸಂಸ್ಥೆ ಇತ್ತೀಚೆಗಿನ ದಿನಗಳಲ್ಲಿ ಆಪಲ್ ಮತ್ತು ಸ್ಯಾಮ್‌ಸಂಗ್‌ಗಳ ತೀವ್ರ ಸ್ಪರ್ಧೆಯನ್ನು ತಡೆಯಲಾಗದೇ ಸಾಕಷ್ಟು ನಷ್ಟವನ್ನು ಅನುಭವಿಸಿತ್ತು.

ಆಪಲ್ ಮತ್ತು ಸ್ಯಾಮ್‌ಸಂಗ್ ಸಂಸ್ಥೆಗಳ ತೀವ್ರ ಸ್ಪರ್ಧೆಯಿಂದಾಗಿ ನೋಕಿಯಾ 2011ರಲ್ಲಿ ಮೈಕ್ರೋಸಾಫ್ಟ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ತನ್ನ ಲುಮಿಯಾ ಸರಣಿ ಮೊಬೈಲ್‌ಗಳಿಗೆ ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಅನ್ನು ಅಳವಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು.

ಆರಂಭದಲ್ಲಿ ಭಾರಿ ಸದ್ದು ಮಾಡಿದ್ದ ನೋಕಿಯಾ ಲುಮಿಯಾ ಸರಣಿ ಮೊಬೈಲ್‌ಗಳು, ತದ ನಂತರ ಆಪಲ್ ಮತ್ತು ಸ್ಯಾಮ್‌ಸಂಗ್ ಆಂಡ್ರಾಯ್ಡ್ ಮೊಬೈಲ್‌ಗಳ ಕಾರ್ಯಕ್ಷಮತೆಯ ಮುಂದೆ ಮಂಕಾಗಿತ್ತು. ಅಲ್ಲದೆ ವಿಂಡೋಸ್ ಮೊಬೈಲ್‌ಗಳಲ್ಲಿನ ಆಪ್ಸ್‌ಗಳು ದುಬಾರಿಯಾಗಿರುವುದು ಕೂಡ ಗ್ರಾಹಕರನ್ನು ಆಂಡ್ರಾಯ್ಡ್ ಮೊಬೈಲ್‌ಗಳತ್ತ ವಾಲುವಂತೆ ಮಾಡಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement