ಸಿರಿಯಾ ಮೇಲೆ ಅಮೆರಿಕ ಕ್ಷಿಪಣಿ ದಾಳಿ?
ಸಿರಿಯಾದತ್ತ ಅಮೆರಿಕದ ಎರಡು ಕ್ಷಿಪಣಿಗಳು ಚಿಮ್ಮಿದ್ದು, ಇದರಿಂದ ಗ್ಯಾಸ್ ಪೈಪ್ ಲೈನ್ ಸ್ಫೋಟಗೊಂಡಿದೆ ಎಂದು ಮಾಧ್ಯಮಗಳು...
ನವದೆಹಲಿ: ಸಿರಿಯಾ ಮೇಲೆ ಅಮೆರಿಕ ಕ್ಷಿಪಣಿ ದಾಳಿ ಮಾಡಿರುವ ಸಾಧ್ಯತೆ ಇದ್ದು, ಸಿರಿಯಾದತ್ತ ಅಮೆರಿಕದ ಎರಡು ಕ್ಷಿಪಣಿಗಳು ಚಿಮ್ಮಿವೆ. ಇದರಿಂದ ಅಲ್ಲಿನ ಗ್ಯಾಸ್ ಪೈಪ್ ಲೈನ್ ಸ್ಫೋಟಗೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇಂದು ಬೆಳಗ್ಗೆ ಸುಮಾರು 10:16ರ ಸುಮಾರಿನಲ್ಲಿ ಕ್ಷಿಪಣಿ ದಾಳಿ ನಡೆದಿದ್ದು, ದಾಳಿಯಿಂದಾಗಿಯೇ ಸಿರಿಯಾದಲ್ಲಿನ ಗೌಜೌ ಪ್ರದೇಶದಲ್ಲಿರುವ ಗ್ಯಾಸ್ ಪೈಪ್ ಲೈನ್ ಸ್ಫೋಟಗೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಆದರೆ ಸಿರಿಯಾ ಮಾಧ್ಯಮಗಳ ವರದಿಯನ್ನು ಅಲ್ಲಗಳೆದಿರುವ ಸಿರಿಯಾ ಸರ್ಕಾರ, ತಮ್ಮ ರಾಡಾರ್‌ಗೆ ಯಾವುದೇ ಕ್ಷಿಪಣಿಗಳ ಸುಳಿವು ಸಿಕ್ಕಿಲ್ಲ ಎಂದು ಸ್ಪಷ್ಟನೆ ನೀಡಿದೆ. ಆದರೆ ಪ್ರಸ್ತುತ ಸ್ಪೋಟಗೊಂಡಿರುವ ಗ್ಯಾಸ್ ಪೈಪ್ ಲೈನ್ ಕುರಿತು ಯಾವುದೇ ಮಾಹಿತಿ ಇಲ್ಲ. ವರದಿ ಬಂದ ಬಳಿಕ ಈ ಬಗ್ಗೆ ಮಾಹಿತಿ ನೀಡುವುದಾಗಿ ಸಿರಿಯಾ ಸರ್ಕಾರ ಹೇಳಿದೆ.
ಕ್ಷಿಪಣಿ ದಾಳಿ ನಡೆದಿದೆ ಎಂದ ರಷ್ಯಾ
ಈ ನಡುವೆ ಸಿರಿಯಾ ದೇಶದ ಮೇಲೆ ಅಮೆರಿಕ ತನ್ನ 2 ಕ್ಷಿಪಣಿಗಳನ್ನು ಉಡಾಯಿಸಿದ್ದು, ಕ್ಷಿಪಣಿ ಉಡಾವಣೆಯಾದ ಬಳಿಕ ತನ್ನ ರಾಡಾರ್ ವ್ಯವಸ್ಥೆ ಕ್ಷಿಪಣಿಗಳನ್ನು ಗುರುತಿಸಿದೆ ಎಂದು ರಷ್ಯಾ ಹೇಳಿಕೊಂಡಿದೆ. ಭಾರತೀಯ ಕಾಲಮಾನ ಇಂದು ಬೆಳಗ್ಗೆ 10:16 ಸುಮಾರಿನಲ್ಲಿ ರಷ್ಯಾದ ರಾಡಾರ್‌ಗೆ ಅಮೆರಿಕದ ಕ್ಷಿಪಣಿ ಹಾರಾಟದ ಕುರಿತು ಮಾಹಿತಿ ಲಭ್ಯವಾಗಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯದ ವಕ್ತಾರರು ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ರುಪಾಯಿ ಮೌಲ್ಯ ಮತ್ತೆ ಕುಸಿತ
ಇತ್ತ ಸಿರಿಯಾ ಮಾಧ್ಯಮಗಳು ಅಮೆರಿಕದ ಕ್ಷಿಪಣಿ ದಾಳಿ ಕುರಿತು ವರದಿ ಪ್ರಸಾರ ಮಾಡುತ್ತಿದ್ದಂತೆಯೇ ಷೇರುಮಾರುಕಟ್ಟೆಯಲ್ಲಿ ರುಪಾಯಿ ಮೌಲ್ಯ ಮತ್ತಷ್ಟು ಕುಸಿತ ಕಂಡಿದೆ. ಪ್ರತಿ ಅಮೆರಿಕನ್ ಡಾಲರ್‌ನ ಬೆಲೆ 68 ರುಪಾಯಿ ಗಡಿಯನ್ನು ದಾಟಿದೆ. ಅಲ್ಲದೆ ಸೆನ್ಸೆಕ್ಸ್ ಕೂಡ ಇಳಿಕೆಯತ್ತ ಮುಖ ಮಾಡಿದ್ದು, ಇಂದು ಮಧ್ಯಾಹ್ನದ ಹೊತ್ತಿಗೆ 700 ಅಂಕಗಳನ್ನು ಕಳೆದುಕೊಂಡಿದೆ.
ಇದು ತನ್ನ ಪರೀಕ್ಷಾರ್ಥ ಉಡಾವಣೆಯಷ್ಟೇ: ಇಸ್ರೇಲ್ ಸ್ಪಷ್ಟನೆ
ಅಮೆರಿಕ ಸಿರಿಯಾ ಮೇಲೆ ದಾಳಿ ನಡೆಸಿಲ್ಲ. ಕ್ಷಿಪಣಿಯನ್ನು ಉಡಾಯಿಸಿದ್ದು ನಾನೇ ಎಂದು ಇಸ್ರೇಲ್ ಸ್ಪಷ್ಟನೆ ನೀಡಿದೆ. ಸಿರಿಯಾದ ಗ್ಯಾಸ್ ಪೈಪ್ ಲೈನ್ ಮೇಲೆ ನಡೆದ ದಾಳಿಯನ್ನು ಅಮೆರಿಕ ದೇಶವೇ ನಡೆಸಿದೆ ಎಂದು ಸಿರಿಯಾ ಮಾಧ್ಯಮಗಳು ವರದಿ ಪ್ರಸಾರ ಮಾಡುತ್ತಿದ್ದಂತೆಯೇ ಕ್ಷಿಪಣಿ ದಾಳಿ ಕುರಿತು ಸ್ಪಷ್ಟನೇ ನೀಡಿರುವ ಇಸ್ರೇಲ್, ಕ್ಷಿಪಣಿಗಳನ್ನು ಉಡಾಯಿಸಿದ್ದು ನಾನೇ ಎಂದು ಒಪ್ಪಿಕೊಂಡಿದೆ. ಅಲ್ಲದೆ ಇದೊಂದು ಪರೀಕ್ಷಾರ್ಥ ಉಡಾವಣೆಯಷ್ಟೇ ಎಂದು ಕ್ಷಿಪಣಿ ಉಡಾವಣೆ ಕುರಿತು ಸ್ಪಷ್ಟೀಕರಣ ನೀಡಿದೆ.
ಒಟ್ಟಾರೆ ಸಿರಿಯಾ ಮತ್ತು ಅಮೆರಿಕ ದೇಶದ ನಡುವಿನ ಯುದ್ಧ ಭೀತಿ ಭಾರತ ಷೇರುಮಾರುಕಟ್ಟೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ತೈಲೋತ್ಪನ್ನ ಬೆಲೆಗಳು ಕೂಡ ಏರಿಕೆಯಾಗುವ ಭೀತಿ ಎದುರಾಗಿದೆ.