ಅಸಾರಾಂ ಬಾಪು ಜಾಮೀನು ಅರ್ಜಿ ವಜಾ
ವಿವಾದಿತ ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪು ಜಾಮೀನು ಅರ್ಜಿಯನ್ನು ಜೋಧ್ಪುರ ನ್ಯಾಯಾಲಯ ವಜಾಗೊಳಿಸಿದೆ.
ಜೋಧ್ಪುರ: ವಿವಾದಿತ ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪು ಜಾಮೀನು ಅರ್ಜಿಯನ್ನು ಜೋಧ್ಪುರ ನ್ಯಾಯಾಲಯ ವಜಾಗೊಳಿಸಿದೆ.
ಬಾಲಕಿಗೆ ಲೈಂಗಿಕ ಕಿರುಕಳ ನೀಡಿದ ಆರೋಪದಲ್ಲಿ ಸಿಲುಕಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ವಿವಾದಿತ ದೇವಮಾನವ ಅಸಾರಾಂಬಾಪು ಜಾಮೀನು ಅರ್ಜಿಯನ್ನು ಜೋಧ್ಪುರ ನ್ಯಾಯಾಲಯ ವಜಾಗೊಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಾಲಯ ಎರಡೂ ಕಡೆಯವರ ವಾದವನ್ನು ಆಲಿಸಿತು. ನಂತರ ತನ್ನ ತೀರ್ಪನ್ನು ಸಂಜೆಯವರೆಗೂ ಕಾಯ್ದಿರಿಸಿ, ಸಂಜೆ ಮತ್ತೆ ವಿಚಾರಣೆ ಆರಂಭವಾದಾಗ ಅಸಾರಾಂ ಜಾಮೀನು ಅರ್ಜಿಯನ್ನು ವಜಾಗೊಳಿಸಿತು.
ಅಸರಾಂ ಬಾಪು ಪ್ರಭಾವಿ ಧಾರ್ಮಿಕ ನಾಯಕನಾಗಿದ್ದು, ತನಿಖಾ ಹಂತದಲ್ಲಿ ಜಾಮೀನು ನೀಡಿದರೆ ತನಿಖೆಯ ಮೇಲೆ ಪ್ರಭಾವ ಬೀರುವ ಆತಂಕವಿದೆ. ಅಲ್ಲದೆ ತನಿಖಾಧಿಕಾರಿಗಳಿಗೆ ಬೆದರಿಕೆ ಹಾಕುವ ಅವಕಾಶವಿದ್ದು, ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆ ಇರುವುದರಿಂದ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.
ವಿವಾದಿತ ದೇವಮಾನವ ಅಸರಾಂ ಬಾಪು ಬಾಲಕಿಗೆ ಲೈಂಗಿಕ ಕಿರುಕಳ ನೀಡಿದ ಆರೋಪದ ಮೇಲೆ ಬಂಧಿತನಾಗಿದ್ದು, ನಿನ್ನೆಯ ವಿಚಾರಣೆಯಲ್ಲಿ ನ್ಯಾಯಾಲಯ ಈತನ ಬಂಧನ ಅವಧಿಯನ್ನು 14 ದಿನಗಳ ಕಾಲ ವಿಸ್ತರಿಸಿತ್ತು. ಹೀಗಾಗಿ ಅಸಾರಾಂ ಬಾಪು ಸೆಪ್ಟೆಂಬರ್ 15ರವರೆಗೆ ಜೋಧ್ಪುರದ ಜೈಲಿನಲ್ಲಿಯೇ ಕಾಲ ಕಳೆಯಬೇಕಿದೆ.