ಆಸ್ಪತ್ರೆಯಿಂದ ಜಗನ್ ಡಿಸ್ಚಾರ್ಜ್
ಹೈದರಾಬಾದ್: ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಯನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ಕೈಗೊಂಡು ಅಸ್ವಸ್ಥರಾಗಿದ್ದ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಗನ್‌ಮೋಹನ್ ರೆಡ್ಡಿ ಅವರನ್ನು ಬುಧವಾರ ಆಸ್ಪತ್ರೆಯಿಂದ ಡಿಸ್ಜಾರ್ಜ್ ಮಾಡಲಾಗಿದೆ.
ಆಂಧ್ರ ಪ್ರದೇಶ ವಿಭಜನೆಯನ್ನು ವಿರೋಧಿಸಿ ಕಳೆದ ಬುಧವಾರ ಜೈಲಿನಿಂದಲೇ ಉಪವಾಸ ಸತ್ಯಾಗ್ರಹ ಆರಂಭಿಸಿದ್ದ ವೈಎಸ್ ಜಗನ್ ಅವರು ಕಳೆದ ಶನಿವಾರದಂದು ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಜೈಲಿನ ಆಸ್ಪತ್ರೆಗೆ ದಾಖಲಿಸಿತ್ತಾದರೂ, ಹೆಚ್ಚಿನ ಚಿಕಿತ್ಸೆಗಾಗಿ ನಿಜಾಮ್ ವೈದ್ಯಕೀಯ ಶಿಕ್ಷಣ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ತೀವ್ರ ಅಸ್ವಸ್ಥಗೊಂಡಿದ್ದ ಜಗನ್ ಅವರು ಕೂಡಲೇ ಉಪವಾಸ ಸತ್ಯಾಗ್ರಹವನ್ನು ಕೈ ಬಿಡಬೇಕು ಎಂದು ವೈಎಸ್ ಕಾಂಗ್ರೆಸ್ ಮುಖಂಡರು ಮತ್ತು ಜಗನ್ ಅವರ ತಾಯಿ ವಿಜಯಮ್ಮ ಅವರ ಮನವಿ ಮಾಡಿದ್ದರು. ಕೊನೆಗೆ ನಿಜಾಮ್ ಆಸ್ಪತ್ರೆಯ ವೈದ್ಯರು ಬಲವಂತವಾಗಿ ಜಗನ್‌ಗೆ ದ್ರವಾಹಾರ ನೀಡಿ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದರು. ಇದೀಗ ಜಗನ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಇಂದು ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಜಗನ್ ಅವರನ್ನು ನಿಜಾಮ್ ಆಸ್ಪತ್ರೆಯಿಂದ ಚಂಚಲಗೂಡ ಆಸ್ಪತ್ರೆಗೆ ಪೊಲೀಸರು ಕರೆದೊಯ್ದಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಚಾರಣೆ ಎದುರಿಸುತ್ತಿರುವ ಜಗನ್ ಪ್ರಸ್ತುತ ಚಂಚಲಗೂಡ ಜೈಲಿನಲ್ಲಿದ್ದಾರೆ.