9 ವರ್ಷದಿಂದ ಯುವತಿ ಮೇಲೆ ತಂದೆ, ತಮ್ಮನಿಂದಲೇ ಅತ್ಯಾಚಾರ
25 ವರ್ಷದ ಮಗಳ ಮೇಲೆ ಹೆತ್ತ ತಂದೆ ಹಾಗು ತಮ್ಮನೇ ಸತತ 9 ವರ್ಷಗಳಿಂದ ಅತ್ಯಾಚಾರ ನಡೆಸಿದ ಘಟನೆ ಉ. ಪ್ರದೇಶದ ಕೃಷ್ಣಾ ನಗರದಲ್ಲಿ ಬೆಳಕಿಗೆ ಬಂದಿದೆ.
ಲಖನೌ: ತಾಯಿಯ ಮೌನ ಸಮ್ಮತಿಯೊಂದಿಗೆ 25 ವರ್ಷದ ಮಗಳ ಮೇಲೆ ಹೆತ್ತ ತಂದೆ ಹಾಗು ತಮ್ಮನೇ ಸತತ 9 ವರ್ಷಗಳಿಂದ ಅತ್ಯಾಚಾರ ನಡೆಸಿದ ಘಟನೆ ಉತ್ತರ ಪ್ರದೇಶದ ಕೃಷ್ಣಾ ನಗರದಲ್ಲಿ ಗುರುವಾರ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಜನತಾ ದರ್ಶನದ ಸಂದರ್ಭದಲ್ಲಿ ಸ್ವತಃ ಅತ್ಯಾಚಾರಕ್ಕೊಳಗಾದ ಯುವತಿ ಈ ವಿಚಾರವನ್ನು ಬಹಿರಂಗ ಪಡಿಸಿದ್ದಾಳೆ. ಮೂಲತಃ ಲಖನೌನ ಕೃಷ್ಣಾ ನಗರದ ನಿವಾಸಿಯಾಗಿರುವ ಈ ಯುವತಿ ವೃತ್ತಿಯಲ್ಲಿ ಬ್ಯೂಟಿಷಿಯನ್ ಎಂದು ಹೇಳಿಕೊಂಡಿದ್ದಾಳೆ. 'ತಾನು ಕೃಷ್ಣಾ ನಗರದ ನಿವಾಸಿಯಾಗಿದ್ದು, ನನಗೆ 16 ವರ್ಷ ತುಂಬಿದಾಗಿನಿಂದಲೂ ತನ್ನ ತಂದೆ ಮತ್ತು ಸೋದರ ನಿರಂತರ ಅತ್ಯಾಚಾರ ಮಾಡುತ್ತಿದ್ದಾರೆ. ಅತ್ಯಾಚಾರದ ವಿಷಯವನ್ನು ಬೇರೆಯವರಿಗೆ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದರು' ಎಂದು ಯುವತಿ ಆರೋಪಿಸಿದ್ದಾಳೆ.
ಅಲ್ಲದೆ ತಂದೆ ಮತ್ತು ಸೋದರನ ಈ ಕೃತ್ಯಕ್ಕೆ ತನ್ನ ತಾಯಿ ಕೂಡ ಮೌನ ಸಮ್ಮತಿ ಸೂಚಿಸಿದ್ದರು. ಅವರ ದುಷ್ಕೃತ್ಯದ ಕುರಿತು ಅವರು ಒಮ್ಮೆಯೂ ವಿರೋಧ ವ್ಯಕ್ತಪಡಿಸಿರಲಿಲ್ಲ. ಈ 9 ವರ್ಷದ ಅವಧಿಯಲ್ಲಿ ತಾನು ಹಲವಾರು ಭಾರಿ ಗರ್ಭಧರಿಸಿದ್ದು, ಬಲವಂತವಾಗಿ ತನಗೆ ಗರ್ಭಪಾತ ಮಾಡಿಸಿದ್ದಾರೆ ಎಂದು ಯುವತಿ ಹೇಳಿದ್ದಾಳೆ.
ಯುವತಿಯ ಧಾರುಣ ಕಥೆ ಕೇಳಿದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ದೂರು ದಾಖಲಿಸಿಕೊಂಡು ಆರೋಪಿ ತಂದೆ ಮತ್ತು ಸೋದರನನ್ನು ಬಂಧಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಪ್ರಸ್ತುತ ಯುವತಿಯನ್ನು ಮಹಿಳಾ ಪೊಲೀಸ್ ರಕ್ಷಣೆಯಲ್ಲಿರಿಸಲಾಗಿದ್ದು, ಆರೋಪಿ ಸಹೋದರ, ಯುವತಿಯ ತಾಯಿ ಮತ್ತು ಆರೋಪಿ ತಂದೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಂತೆಯೇ ಯುವತಿಯ ತಂದೆ ಪೊಲೀಸರ ಆತಿಥ್ಯ ಸ್ವೀಕರಿಸುತ್ತಿದ್ದಂತೆಯೇ ಅತ್ಯಾಚಾರ ಎಸಗಿದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಸೋದರ, ತಂದೆ ಮತ್ತು ತಾಯಿ ವಿರುದ್ಧ ಲಖನೌ ಪೊಲೀಸರು ಭಾರತೀಯ ದಂಡಸಂಹಿತೆ 120(ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ ಹೆಚ್ಚಿನ ವಿವರಕ್ಕಾಗಿ ಯುವತಿ ಮತ್ತು ಆಕೆಯ ತಂದೆ, ಸೋದರನನ್ನು ವೈದ್ಯಕೀಯ ಪರೀಕ್ಷೆಗೆ ರವಾನಿಸಿದ್ದಾರೆ.