ಉ.ಖಂಡ ದುರಂತ: ಕೇದರಾ ಕಣಿವೆಯಲ್ಲಿ 64 ಶವ ಪತ್ತೆ
ಉತ್ತರಾಖಂಡದಲ್ಲಿ ಸಂಭವಿಸಿದ್ದ ಪ್ರವಾಹದಲ್ಲಿ ಸಾವನ್ನಪ್ಪಿದ ಸುಮಾರು 64 ಜನರ ಶವಗಳು ಕೇದಾರನಾಥ ಕಣಿವೆಯಲ್ಲಿ...
ಡೆಹ್ರಾಡೂನ್: ಉತ್ತರಾಖಂಡದಲ್ಲಿ ಸಂಭವಿಸಿದ್ದ ಪ್ರವಾಹದಲ್ಲಿ ಸಾವನ್ನಪ್ಪಿದ ಸುಮಾರು 64 ಜನರ ಶವಗಳು ಕೇದಾರನಾಥ ಕಣಿವೆಯಲ್ಲಿ ಗುರುವಾರ ಪತ್ತೆಯಾಗಿವೆ.
ಕಳೆದ ಜೂನ್ ತಿಂಗಳಲ್ಲಿ ಸಂಭವಿಸಿದ್ದ 'ಮೇಘಸ್ಫೋಟ' ಮಳೆಯಿಂದಾಗಿ ಪ್ರಮುಖ ಧಾರ್ಮಿಕ ಕ್ಷೇತ್ರ ಕೇದಾರನಾಥ ಮತ್ತು ಬದ್ರಿನಾಥದಲ್ಲಿ ಸಾವಿರಾರು ಪ್ರವಾಸಿಗರು ಸಾವನ್ನಪ್ಪಿ, ನೂರಾರು ಯಾತ್ರಿಕರು ಕಣ್ಮರೆಯಾಗಿದ್ದರು. ಇದೀಗ ವಾತಾವರಣ ತಿಳಿಗೊಳ್ಳುತ್ತಿದ್ದಂತೆಯೇ ಪ್ರವಾಹದಲ್ಲಿ ಕೊಚ್ಚಿಹೋದ ಯಾತ್ರಿಕರ ಶವಗಳು ಒಂದೊಂದಾಗಿ ಪತ್ತೆಯಾಗುತ್ತಿವೆ. ಕೇದಾರ ಕಣಿವೆಯಲ್ಲಿ ಇಂದು ಸುಮಾರು 64 ಶವಗಳು ಪತ್ತೆಯಾಗಿದ್ದು, ಈ 64 ಮಂದಿ ಮೃತರನ್ನು ಸಾಧುಗಳೆಂದು ಗುರುತಿಸಲಾಗಿದೆ.
ಪ್ರವಾಹ ಸಂಭವಿಸಿದ ಸಂದರ್ಭದಲ್ಲಿ ಇವರು ರಾಮಬಡ ಮತ್ತು ಕೇದಾರ ಕಣಿವೆ ಮಾರ್ಗವಾಗಿ ಕಾಲ್ನಡಿಗೆಯಲ್ಲಿ ಕೇದಾರನಾಥ ದೇವಾಲಯಕ್ಕೆ ತೆರಳುತ್ತಿದ್ದರು ಎಂದು ಹೇಳಲಾಗುತ್ತಿದೆ. ಕೇದಾರ ಕಣಿವೆಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದರಿಂದ ಇಷ್ಟು ದಿನ ಈ ಶವಗಳು ಯಾರ ಕಣ್ಣಿಗೂ ಕಾಣಿಸಿರಲಿಲ್ಲ. ಇದೀಗ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗುತ್ತಿದ್ದಂತೆಯೇ ಶವಗಳು ಗೋಚರಿಸಿವೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶವಗಳು ಇಲ್ಲಿಯವರೆಗೆ ನೀರಿನಲ್ಲೇ ಇದ್ದುದರಿಂದ ಗುರುತಿಸಲಾಗದಷ್ಟು ಕೊಳೆತು ಹೋಗಿದ್ದು, ಇವುಗಳನ್ನು ಕೂಡ ಹಿಂದೂ ಧಾರ್ಮಿಕ ವಿಧಿವಿಧಾನದಂತೆ ಸಾಮೂಹಿಕವಾಗಿ ಶವ ಸಂಸ್ಕಾರ ಮಾಡಲಾಗುವುದು ಎಂದು ಅಧಿಕಾರಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ.