ಚೇತರಿಕೆಯತ್ತ ಮಾರುಕಟ್ಟೆ, ಚಿನ್ನದ ದರ ಭಾರಿ ಇಳಿಕೆ
ಆರ್ಬಿಐನ ನೂತನ ಗವರ್ನರ್ ಆಗಿ ರಘುರಾಮ್ ರಾಜನ್ ಅವರು ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಭಾರತದ ಷೇರು ಮಾರುಕಟ್ಟೆ ಅಲ್ಪ ಚೇತರಿಕೆ ಕಂಡಿದೆ.
ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನೂತನ ಗವರ್ನರ್ ಆಗಿ ರಘುರಾಮ್ ರಾಜನ್ ಅವರು ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಭಾರತದ ಷೇರು ಮಾರುಕಟ್ಟೆ ಅಲ್ಪ ಚೇತರಿಕೆ ಕಂಡಿದೆ.
ಆರ್ಬಿಐನ ನೂತನ ಗವರ್ನರ್ ಆಗಿ ಹಿರಿಯ ಆರ್ಥಿಕ ತಜ್ಞ ಮತ್ತು ಆರ್ಥಿಕ ಪ್ರಾಧ್ಯಾಪಕರಾಗಿರುವ ರಘುರಾಮ್ ರಾಜನ್ ಅವರು ನಿನ್ನೆ ಅಧಿಕಾರ ವಹಿಸಿಕೊಂಡಿದ್ದರು. ಅಲ್ಲದೆ ಕುಸಿತ ಕಂಡಿರುವ ಮಾರುಕಟ್ಟೆ ಪರಿಸ್ಥಿತಿ ಸುಧಾರಿಸಲು ಪ್ರಯತ್ನಿಸುವುದಾಗಿ ತಿಳಿಸಿದ್ದರು. ಅವರ ಹೇಳಿಕೆ ನೀಡಿದ 24 ಗಂಟೆಯಲ್ಲಿಯೇ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ 400 ಅಂಕಗಳನ್ನು ಗಳಿಸಿಕೊಂಡಿದೆ. ಅಲ್ಲದೆ ಪ್ರಪಾತಕ್ಕೆ ಬಿದ್ದಿದ್ದ ರುಪಾಯಿ ಮೌಲ್ಯದಲ್ಲಿಯೂ ಚೇತರಿಕೆ ಕಂಡು ಬಂದಿದ್ದು, ಪ್ರತಿ ಡಾಲರ್ನ ಬೆಲೆ ಇದೀಗ 66 ರುಪಾಯಿಯಾಗಿದೆ.
ನೂತನ ಆರ್ಬಿಐ ಗವರ್ನರ್ ರಘುರಾಮ್ ರಾಜನ್ ಅವರು ಬ್ಯಾಂಕುಗಳಿಗೆ ನೀಡಿದ ಉತ್ತೇಜನಕಾರಿ ಆಶ್ವಾಸನೆಯ ಹಿನ್ನಲೆಯಲ್ಲಿ ಪ್ರಮುಖ ಬ್ಯಾಂಕುಗಳಾದ ಹೆಚ್ಡಿಎಫ್ಸಿ ಬ್ಯಾಂಕ್, ಎಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಸೇರಿದಂತೆ ಪ್ರಮುಖ ಬ್ಯಾಂಕ್ಗಳು ತಮ್ಮ ಡಾಲರ್ ಬೇಡಿಕೆಯನ್ನು ಕಡಿತಗೊಳಿಸಿಕೊಂಡಿದ್ದವು. ಇದರ ಪರಿಣಾಮವಾಗಿ ರುಪಾಯಿ ಮೌಲ್ಯ ಅಲ್ಪ ಚೇತರಿಕೆ ಕಂಡಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಚಿನ್ನದ ಬೆಲೆಯಲ್ಲಿಯೂ ಭಾರಿ ಇಳಿಕೆ
ಷೇರು ಮಾರುಕಟ್ಟೆಯಲ್ಲಾದ ಪರಿಣಾಮವು ಭಾರತದ ಚಿನಿವಾರ ಪೇಟೆಯ ಮೇಲೆಯೂ ಬೀರಿದ್ದು, ಚಿನ್ನದ ದರದಲ್ಲಿ ಇಂದು ಭಾರಿ ಇಳಿಕೆ ಕಂಡು ಬಂದಿದೆ. ನಿನ್ನೆಯಷ್ಟೇ 33 ಸಾವಿರ ಗಡಿದಾಟಿದ್ದ ಚಿನ್ನ ದರ, ಇಂದು 1, 250 ರುಪಾಯಿ ಕಡಿತಗೊಳ್ಳುವುದರೊಂದಿಗೆ 30,950 ರುಪಾಯಿಗಳಿಗೆ ಇಳಿಕೆಯಾಗಿದೆ.