ತಾಲಿಬಾನಿಗಳಿಂದ ಭಾರತೀಯ ಲೇಖಕಿಯ ಹತ್ಯೆ
ತಾಲಿಬಾನಿ ಉಗ್ರರು ಸುಷ್ಮಿತಾ ಬ್ಯಾನರ್ಜಿ ಎಂಬ ಭಾರತೀಯ ಮೂಲದ ಲೇಖಕಿಯನ್ನು ಗುಂಡಿಟ್ಟು ಹತ್ಯೆಗೈದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾಬೂಲ್: ತಾಲಿಬಾನಿ ಉಗ್ರರು ಸುಷ್ಮಿತಾ ಬ್ಯಾನರ್ಜಿ ಎಂಬ ಭಾರತೀಯ ಮೂಲದ ಲೇಖಕಿಯನ್ನು ಗುಂಡಿಟ್ಟು ಹತ್ಯೆಗೈದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಫ್ಘಾನಿಸ್ತಾನದ ಪಾಕ್ಟಿಕಾ ಪ್ರಾಂತ್ಯದಲ್ಲಿ ಭಾರತೀಯ ಮೂಲದ ಲೇಖಕಿ ಸುಷ್ಮಿತಾ ಬ್ಯಾನರ್ಜಿ ಅವರನ್ನು ತಾಲಿಬಾನ್ ಉಗ್ರರು ಗುಂಡಿಟ್ಟು ಹತ್ಯೆಗೈದಿದ್ದಾರೆ. ತಾಲಿಬಾನಿಗಳ ವಿರುದ್ಧ ಪುಸ್ತಕ ಬರೆದಿದ್ದಕ್ಕಾಗಿ ಸೇಡಿನ ಪ್ರತೀಕಾರವಾಗಿ ತಾಲಿಬಾನಿಗಳು ಈ ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಸುಷ್ಮಿತಾ ಅವರ ಪಾಕ್ಟಿಕಾ ಪ್ರಾಂತ್ಯದ ಮನೆಯ ಮೇಲೆ ಇಂದು ಸಂಜೆ ದಾಳಿ ನಡೆಸಿರುವ ತಾಲಿಬಾನಿ ಉಗ್ರರು ಸುಷ್ಮಿತಾ ಅವರ ಸಂಬಂಧಿಕರ ಮುಂದೆಯೇ ಅವರನ್ನು ಮನೆಯಿಂದ ಹೊರಗೆಳೆದು ತಂದು ಗುಂಡಿಕ್ಕಿ ಹತ್ಯೆಗೈದಿದ್ದಾರೆ.
ಮೂಲತಃ ಭಾರತದವರಾದ ಲೇಖಕಿ ಸುಷ್ಮಿತಾ ಬ್ಯಾನರ್ಜಿ ಅವರು, ಆಫ್ಘನ್ ಮೂಲದ ಉದ್ಯಮಿಯೊಬ್ಬರನ್ನು ವಿವಾಹವಾಗಿ ಆಫ್ಘಾನಿಸ್ತಾನದ ಪಾಕ್ಟಿಕಾ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಈ ಹಿಂದೆ ತಾಲಿಬಾನಿ ಉಗ್ರರು ದಾಳಿ ನಡೆಸಿದ್ದಾಗ ಲೇಖಕಿ ಸುಷ್ಮಿತಾ ಬ್ಯಾನರ್ಜಿ ಅವರು ಅಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದರು. ತಾಲಿಬಾನಿ ಉಗ್ರರ ದಾಳಿಯಿಂದ ತಪ್ಪಿಸಿಕೊಂಡಿದ್ದ ಸುಷ್ಮಿತಾ ಅವರು, ತಮ್ಮ ಕಥೆಯನ್ನು ಪುಸ್ತಕದ ರೀತಿಯಲ್ಲಿ ಹೊರತಂದಿದ್ದರು. ತಮ್ಮ ಪುಸ್ತಕದಲ್ಲಿ ತಾಲಿಬಾನಿ ಉಗ್ರರ ಕ್ರೂರತೆ ಮತ್ತು ಉಗ್ರರಿಂದ ಅವರು ತಪ್ಪಿಸಿಕೊಂಡ ರೀತಿಯನ್ನು ವಿವರಿಸಿದ್ದರು.
ಸುಷ್ಮಿತಾ ಬ್ಯಾನರ್ಜಿ ಹೊರತಂದಿದ್ದ ಪುಸ್ತಕದ ವಿರುದ್ಧ ಕೆಂಗಣ್ಣು ಬೀರಿದ್ದ ತಾಲಿಬಾನಿಗಳು ಇಂದು ಅವರನ್ನು ಕ್ರೂರವಾಗಿ ಹತ್ಯೆಗೈಯ್ಯುವ ಮೂಲಕ ತಮ್ಮ ಕ್ರೂರತ್ವವನ್ನು ಮೆರೆದಿದ್ದಾರೆ.
ಚಿತ್ರ ಕೃಪೆ: ಎ.ಎಫ್.ಪಿ