ಅಕ್ರಮ ಆಸ್ತಿ ಗಳಿಕೆ: ಜಗನ್ ಬಂಧನ ಅವಧಿ ವಿಸ್ತರಣೆ
ಹೈದರಾಬಾದ್: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಗನ್ಮೋಹನ್ ರೆಡ್ಡಿ ಅವರ ನ್ಯಾಯಾಂಗ ಬಂಧನ ಅವಧಿಯನ್ನು ನ್ಯಾಯಾಲಯ ವಿಸ್ತರಿಸಿದೆ.
ಅಕ್ರಮ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯ ಜಗನ್ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 20ರವರೆಗೂ ವಿಸ್ತರಿಸಿದೆ. ಜಗನ್ ಸೇರಿದಂತೆ ಪ್ರಕರಣದ ಇತರೆ ಆರೋಪಿಗಳಾದ ಜಗನ್ ಸಂಸ್ಥೆಯ ಆಡಿಟರ್ ವಿಜಯ್ ಸಾಯಿ ರೆಡ್ಡಿ, ಮಾಜಿ ಸಚಿವ ಮಾಪಿದೇವಿ ವೆಂಕಟ ರಮಣ ರಾವ್, ಉದ್ಯಮಿ ನಿಮ್ಮಗಡ್ಡ ಪ್ರಸಾದ್ ಮತ್ತು ಕೆ.ವಿ.ಬ್ರಹ್ಮಾನಂದ ರೆಡ್ಡಿ ಅವರ ನ್ಯಾಯಾಂಗ ಬಂಧನವನ್ನು ಕೂಡ ನ್ಯಾಯಾಲಯ 14 ದಿನಗಳ ಕಾಲ ವಿಸ್ತರಿಸಿದೆ.
ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ದಿ.ವೈ.ಎಸ್.ರಾಜಶೇಖರ ರೆಡ್ಡಿ ಅವರ ಪುತ್ರನಾಗಿರುವ ಜಗನ್ ಮೋಹನ್ ರೆಡ್ಡಿ ಅವರು ತಮ್ಮ ತಂದೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಕ್ರಮ ಟೆಂಡರ್ ಪ್ರಕ್ರಿಯೆ ಮೂಲಕ ತಮ್ಮ ಸಂಸ್ಥೆಗೆ ಲಾಭ ಮಾಡಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಜಗನ್ ಅವರ ಈ ಕೆಲಸಕ್ಕೆ ರಾಜಶೇಖರ ರೆಡ್ಡಿ ಅವರ ಸಂಪುಟದ ಕೆಲ ಸಚಿವರು ಕೂಡ ಭಾಗಿಯಾಗಿದ್ದಾರೆ ಎಂಬ ಆರೋಪಿಗಳು ಕೇಳಿಬಂದಿದ್ದವು. ಅದರಂತೆ ರೆಡ್ಡಿ ಸಂಪುಟದಲ್ಲಿ ಸಚಿವರಾಗಿದ್ದ ಮಾಪಿದೇವಿ ವೆಂಕಟ ರಮಣ ರಾವ್ ಅವರು ಕೂಡ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾರೆ.
ಇವಿಷ್ಟೇ ಅಲ್ಲದೆ ಕರ್ನಾಟಕದ ಗಣಿದೊರೆ ಜನಾರ್ದನ ರೆಡ್ಡಿ ಅವರೊಂದಿಗೂ ಕೂಡ ಜಗನ್ ವ್ಯವಹಾರಿಕ ಸಂಪರ್ಕ ಹೊಂದಿರುವ ಕುರಿತು ಶಂಕೆ ವ್ಯಕ್ತವಾಗಿತ್ತು. ಪ್ರಸ್ತುತ ಗಾಲಿ ಜನಾರ್ದನ ರೆಡ್ಡಿ ಕೂಡ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿ ಹೈದರಾಬಾದಿನ ಚಂಚಲಗೂಡ ಜೈಲಿನಲ್ಲಿದ್ದಾರೆ.