ಕೋರ್ಟ್ ಆವರಣದಲ್ಲೇ ಬಡಿದಾಡಿದ ಸೀಮಾಂಧ್ರ, ತೆಲಂಗಾಣ ವಕೀಲರು
ಹೈದರಾಬಾದ್: ಆಂಧ್ರ ವಿಭಜನೆ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾದ ವಕೀಲರ ನಡುವಿನ ವಾಗ್ವಾದ ಹಿಂಸಗೆ ತಿರುಗಿದ ಘಟನೆ ಶುಕ್ರವಾರ ಹೈದರಾಬಾದಿನ ಹೈಕೋರ್ಟ್ ಆವರಣದಲ್ಲಿ ಸಂಭವಿಸಿದೆ.
ಆಂಧ್ರಪ್ರದೇಶ ವಿಭಜನೆಯನ್ನು ನಿಲ್ಲಿಸಬೇಕು ಎಂದು ಇಂದು ಬೆಳಗ್ಗೆ ನ್ಯಾಯಾಲಯದ ಆವರಣದಲ್ಲಿ ಸೀಮಾಂಧ್ರ ವಕೀಲರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಕಲಾಪಕ್ಕೆ ಹಾಜರಾಗುತ್ತಿದ್ದ ತೆಲಂಗಾಣ ಭಾಗದ ವಕೀಲರನ್ನು ಸೀಮಾಂಧ್ರ ವಕೀಲರು ಅಡ್ಡಗಟ್ಟಿದಾಗ ಉಭಯ ಭಾಗದ ವಕೀಲರು ಪರಸ್ಪರ ವಾಗ್ವಾದಕ್ಕಿಳಿದರು. ವಾಗ್ವಾದ ಅತಿರೇಕಕ್ಕೆ ಹೋಗಿ ವಕೀಲರು ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿ ಬಡಿದಾಡಿಕೊಂಡಿದ್ದಾರೆ. ಘಟನೆಯ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಪೊಲೀಸರು ಲಘು ಲಾಠಿಪ್ರಹಾರ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಅಲ್ಲದೆ ಘರ್ಷಣೆಗಿಳಿದಿದ್ದ ವಕೀಲರನ್ನು ಬಂಧಿಸಿ ಸಂಜೆ ಬಿಡುಗಡೆ ಮಾಡಿದ್ದಾರೆ.
ಮುನ್ನೆಚ್ಚರಿಕಾ ಕ್ರಮವಾಗಿ ಹೈಕೋರ್ಟ್‌ನ ಸುತ್ತಮುತ್ತಲಿನ ಪ್ರದೇಶದಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ಸೀಮಾಂಧ್ರ ವಕೀಲರ ಧೋರಣೆಯನ್ನು ಖಂಡಿಸಿರುವ ತೆಲಂಗಾಣ ವಕೀಲರು ನಾಳೆ 'ಹೈಕೋರ್ಟ್ ಚಲೋ' ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಶೀಘ್ರ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಿದ್ದಾರೆ.