'ನಿತ್ಯಾ' ಆಶ್ರಮದಲ್ಲಿ ಮಹಿಳೆ ಮೇಲೆ ಅತ್ಯಾಚಾರ?
ವಿವಾದಿತ ಸ್ವಾಮಿ ನಿತ್ಯಾನಂದನ ಬೆಂಗಳೂರು ಆಶ್ರಮದಲ್ಲಿ ಮಹಿಳೆ ಮೇಲೆ ಅತ್ಯಾಚಾರ ನಡೆದಿರುವ ಕುರಿತು ಮಾಹಿತಿ ಲಭ್ಯವಾಗಿವೆ.
ಬೆಂಗಳೂರು: ವಿವಾದಿತ ಸ್ವಾಮಿ ನಿತ್ಯಾನಂದನ ಬೆಂಗಳೂರು ಆಶ್ರಮದಲ್ಲಿ ಮಹಿಳೆ ಮೇಲೆ ಅತ್ಯಾಚಾರ ನಡೆದಿರುವ ಕುರಿತು ಮಾಹಿತಿ ಲಭ್ಯವಾಗಿವೆ.
ಬೆಂಗಳೂರಿನ ಬಿಡದಿ ಬಳಿ ಇರುವ ನಿತ್ಯಾನಂದ ಆಶ್ರಮದ ವಾಸಿಯಾಗಿರುವ ತಮಿಳುನಾಡು ಮೂಲದ ನಿತ್ಯ ಶಾಂತಮಯ ಎಂಬ ಭಕ್ತೆಯ ಮೇಲೆ ಅತ್ಯಾಚಾರ ನಡೆದಿದೆ ಎಂದು ಹೇಳಲಾಗುತ್ತಿದೆ. ಆದರೆ ಅತ್ಯಾಚಾರ ನಡೆಸಿದವರ ಕುರಿತು ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. ಮಹಿಳೆ ಮೇಲೆ ಅತ್ಯಾಚಾರ ನಡೆಸಿದವರು ನಿತ್ಯಾ ಆಶ್ರಮದ ಭಕ್ತರೆ ಅಥವಾ ಆಶ್ರಮದ ಸಿಬ್ಬಂದಿಗಳೇ ಎಂಬ ಅನುಮಾನ ಮೂಡುತ್ತಿದೆ.
ತನ್ನ ಮೇಲೆ ನಾಲ್ಕು ಜನರು ಅತ್ಯಾಚಾರವೆಸಗಿದ್ದಾರೆ ಎಂದು ಅತ್ಯಾಚಾರಕ್ಕೊಳಗಾದ ಮಹಿಳೆ ಹೇಳುತ್ತಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ನಿತ್ಯಾನಂದನ ಖಾಸಾ ಶಿಷ್ಯ ಸಂತೋಷ್, ಆಶ್ರಮದಲ್ಲಿ ಕೆಲಸ ನಿರ್ವಹಿಸುವ ನಾಲ್ಕು ಮಂದಿ ಸಿಬ್ಬಂದಿಗಳು ಆಶ್ರಮದ ಭಕ್ತೆ ನಿತ್ಯ ಶಾಂತಮಯ (ಶ್ರಾವಣಿ) ಅವರೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಈ ಬಗ್ಗೆ ಮಾತನಾಡಲು ನಿತ್ಯ ಶಾಂತಮಯ ಅವರ ಪೋಷಕರನ್ನು ಬರಹೇಳಿದ್ದು, ಅವರು ಬಂದ ನಂತರ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತೇವೆ ಎಂದು ತಿಳಿಸಿದ್ದಾರೆ.
ಈ ನಡುವೆ ನಿತ್ಯಾ ಆಶ್ರಮದ ನಾಲ್ವರು ಸಿಬ್ಬಂದಿಗಳು ನಾಪತ್ತೆಯಾಗಿರುವ ಕುರಿತು ಮಾತುಗಳು ಕೇಳಿಬರುತ್ತಿವೆ. ಅಲ್ಲದೆ ನಿತ್ಯಾನಂದನ ವಿರುದ್ಧ ಮಾತನಾಡುವವರನ್ನು ಆಶ್ರಮದಿಂದ ಹೊರಹಾಕಲು ಈ ಅತ್ಯಾಚಾರದ ನಾಟಕ ಮಾಡಿಸಲಾಗುತ್ತಿದೆ ಎಂಬ ಆರೋಪಗಳು ಕೂಡ ಕೇಳಿಬರುತ್ತಿವೆ.
ಒಟ್ಟಾರೆ ವಿವಾದಿತ ಸ್ವಾಮಿ ನಿತ್ಯಾನಂದನ ಆಶ್ರಮದಲ್ಲಿ ನಡೆಯುತ್ತಿರುವ ಘಟನೆಗಳು, ಆಶ್ರಮದ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟಿಹಾಕಿವೆ.