ಮಾಹಿತಿದಾರನ ಸುಳಿವು ಆಧರಿಸಿ 'ಸೈಕೋ' ಬಂಧನ: ಔರಾದ್ಕರ್
ಜೈ ಶಂಕರ್‌ನನ್ನು ಮಾಹಿತಿದಾರ ನೀಡಿದ ಸುಳಿವಿನಿಂದ ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಹೇಳಿದರು.
ಬೆಂಗಳೂರು: ಜೈಲಿನಿಂದ ಪರಾರಿಯಾಗಿದ್ದ ಸೈಕೋ ಕಿಲ್ಲರ್ ಜೈ ಶಂಕರ್‌ನನ್ನು ನಮ್ಮ ಮಾಹಿತಿದಾರ ನೀಡಿದ ಸುಳಿವಿನಿಂದ ಬಂಧಿಸಲಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಹೇಳಿದರು.
ಪರಪ್ಪನ ಅಗ್ರಹಾರ ಜೈಲಿನಿಂದ ಪರಾರಿಯಾಗಿದ್ದ ಸೈಕೋ ಕಿಲ್ಲರ್ ಜೈಶಂಕರ್‌ನನ್ನು ಇಂದು ಬಂಧಿಸಿದ ಪೊಲೀಸರು, ಈ ಬಗ್ಗೆ ಇಂದು ಸಂಜೆ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಬೆಂಗಳೂರಿನ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಾತನಾಡಿದ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಅವರು, ಜೈಲಿನಿಂದ ಪರಾರಿಯಾಗಿದ್ದ ಜೈಶಂಕರ್‌ನನ್ನು ಹಿರಿಯ ಅಧಿಕಾರಿ ಬಿಕೆ ಸಿಂಗ್ ಅವರ ನೇತೃತ್ವದ ತಂಡ ಯಶಸ್ವಿಯಾಗಿ ಬಂಧಿಸಿದ್ದಾರೆ. ಪೊಲೀಸ್ ಮಾಹಿತಿದಾರನೊಬ್ಬ ನೀಡಿದ ಮಾಹಿತಿಯ ಮೇರೆಗೆ ಇಂದು ಬೆಳಗ್ಗೆ 11.40ರ ವೇಳೆಯಲ್ಲಿ ಬೆಂಗಳೂರಿನ ಕೂಡ್ಲು ಗೇಟ್ ಬಳಿ ಜೈ ಶಂಕರ್‌ನನ್ನು ಬಂಧಿಸಲಾಗಿದೆ.
'ಜೈಶಂಕರ್ ಪರಾರಿಯಾಗಿದ್ದ ದಿನದಿಂದಲೂ ಆತನ ಬಂಧನಕ್ಕಾಗಿ ಕ್ರಮ ಕೈಗೊಂಡಿದ್ದೆವು. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಕೆಜೆ ಜಾರ್ಜ್ ಅವರು ಶಂಕರ್‌ನನ್ನು ಬಂಧಿಸುವಂತೆ ಸೂಚಿಸಿದ್ದರು. ಶಂಕರ್‌ನನ್ನು ಬಂಧಿಸುವ ಸಲುವಾಗಿ ನಾವು ಅನೇಕ ತಂಡಗಳನ್ನು ರಚಿಸಿದ್ದೆವು. ಈತನ ಬಗ್ಗೆ ಮಾಹಿತಿ ನೀಡುವ ಸಾವಿರಾರು ಪೋಸ್ಟರ್‌ಗಳನ್ನು ರಾಜ್ಯಾದ್ಯಂತ ಅಂಟಿಸಿದ್ದೆವು. ಅಲ್ಲದೆ ಹಲವು ಭಾಷೆಗಳಲ್ಲಿ ಈತನ ಬಗ್ಗೆ ಮಾಹಿತಿ ನೀಡಿ, ಸುಳಿವು ನೀಡುವಂತೆ ಕೋರಿದ್ದೆವು'.
'ಇಂದು ನಮ್ಮ ಮಾಹಿತಿದಾರ ನೀಡಿದ ಖಚಿತ ಸುಳಿವಿನ ಮೇರೆಗೆ ಹಿರಿಯ ಪೊಲೀಸ್ ಅಧಿಕಾರಿ ಬಿ.ಕೆ.ಸಿಂಗ್ ಅವರ ನೇತೃತ್ವದ ತಂಡ ಜೈ ಶಂಕರ್‌ನನ್ನು ಉಪಾಯವಾಗಿ ಬಲೆಗೆ ಬೀಳಿಸಿ ಬಂಧಿಸಿದ್ದಾರೆ' ಎಂದು ರಾಘವೇಂದ್ರ ಔರಾದ್ಕರ್ ಹೇಳಿದರು.
ಜೈಶಂಕರ್ ಜೈಲಿನಿಂದ ಪರಾರಿಯಾದ ಬಗೆಯನ್ನು ವಿವರಿಸಿದ ಪೊಲೀಸ್ ಆಯುಕ್ತ ಔರಾದ್ಕರ್ ಅವರು, 'ಜೈ ಶಂಕರ್‌ನನ್ನು ಜೈಲಿನ ಅತ್ಯಂತ ಸುಭದ್ರ ಸ್ಥಳವಾದ ನೆಲಮಾಳಿಗೆಯ ಕೊಠಡಿಯಲ್ಲಿ ಇಡಲಾಗಿತ್ತು. ಆತನೊಂದಿಗೆ ಮತ್ತೋರ್ವ ಖೈದಿಯನ್ನು ಕೂಡ ಇಡಲಾಗಿತ್ತು. ಸೆಪ್ಟೆಂಬರ್ 1ರ ರಾತ್ರಿ ಆತ ಮಲಗುವ ಮುನ್ನ ಜೈಶಂಕರ್‌ನನ್ನು ನೋಡಿದ್ದನು. ಆದರೆ ಮುಂಜಾನೆ ಎದ್ದು ನೋಡಿದಾಗ ಜೈಶಂಕರ್ ಕೊಠಡಿಯಲ್ಲಿರಲಿಲ್ಲ. ವಾರ್ಡನ್ ಕಣ್ತಿಪ್ಪಿಸಿ ಆತ ಜೈಲಿನ ಉದ್ಯಾನವನದ ಗೋಡೆ ಹತ್ತಲು ಪ್ರಯತ್ನಿಸಿದ್ದಾನೆ. ಆದರೆ ಅವನ ಪ್ರಯತ್ನ ಆಗ ಸಫಲವಾಗಿರಲಿಲ್ಲ. ಆದರೆ ಅರ್ಧಗಂಟೆಯ ಬಳಿಕೆ ಜೈಶಂಕರ್ ಜೈಲಿನ ಮತ್ತೊಂದು ಗೋಡೆಯ ಬಳಿ ಇದ್ದ ಕಬ್ಬಿಣದ ಕಂಬಿಗಳನ್ನೇ ಬಳಸಿಕೊಂಡು ಗೋಡೆಯನ್ನು ಹತ್ತಿ, ಬೆಲ್ಟ್ ಮೂಲಕ ಗೋಡೆಯ ಮೇಲಿದ್ದ ವಿದ್ಯುತ್ ತಂತಿಗಳನ್ನು ಕಿರಿದಾಗಿಸಿ ಪರಾರಿಯಾಗಿದ್ದಾನೆ. ಜೈಲಿನ ಆವರಣದಲ್ಲಿ ನಕಲಿ ಕೀ ದೊರೆತ್ತಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಔರಾದ್ಕರ್ ತಿಳಿಸಿದರು.
ಜೈಶಂಕರ್ ಪರಾರಿ ಪ್ರಕರಣದ ಕುರಿತು ಮತ್ತಷ್ಟು ಮಾಹಿತಿಯನ್ನು ನೀಡಲು ನಿರಾಕರಿಸಿದ ಆಯುಕ್ತರು, ಪರಾರಿ ಪ್ರಕರಣದ ಬಗ್ಗೆ ನಮಗೆ ಹಲವು ಶಂಕೆಗಳಿವೆ. ಜೈಲಿನ ಸಿಬ್ಬಂದಿಗಳೇ ಅವನಿಗೆ ಸಹಾಯ ಮಾಡಿದರೆ ಅಥವಾ ಈತನೇ ಪರಾರಿಯಾದನೆ? ಎಂಬುದರ ಬಗ್ಗೆ ತನಿಖೆ ನಡೆಸಬೇಕಿದೆ. ಹೆಚ್ಚಿನ ಮಾಹಿತಿ ನೀಡಿದರೆ ಅಪರಾಧಿಗಳು ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಔರಾದ್ಕರ್ ತಿಳಿಸಿದರು.
ಅಂತೆಯೇ ಜೈ ಶಂಕರ್‌ನನ್ನು ಬಂಧಿಸಿದ ಹಿರಿಯ ಅಧಿಕಾರಿ ಬಿಕೆ ಸಿಂಗ್ ಅವರ ತಂಡವನ್ನು ಪ್ರಶಂಸಿದ ಔರಾದ್ಕರ್ ಅವರು, ಅವರ ತಂಡದ ಸದಸ್ಯರಾದ ರಫೀಕ್, ತಮ್ಮಯ್ಯ, ಪ್ರಶಾಂತ್ ಬಾಬು, ನಾಗರಾಜು, ಬಾಲಚಂದ್ರ ನಾಯಕ್, ಪಿಎಸ್‌ಐಗಳಾದ ರಾಜಶೇಖರ್ ಮತ್ತು ಬಾಬು ಅವರಿಗೆ ಸೂಕ್ತ ಬಹುಮಾನ ನೀಡುವುದಾಗಿ ಹೇಳಿದರು.
ಒಟ್ಟಾರೆ ಜೈಲಿನಿಂದ ಪರಾರಿಯಾಗಿ ರಾಜ್ಯಾದ್ಯಂತ ಭೀತಿ ಹುಟ್ಟಿಸಿದ್ದ ಸೈಕೋ ಕಿಲ್ಲರ್ ಜೈಶಂಕರ್ ಬಂಧನದಿಂದಾಗಿ ರಾಜ್ಯದ ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.