ರುಪಾಯಿ ಮೌಲ್ಯ ಚೇತರಿಕೆ: ಸೆನ್ಸೆಕ್ಸ್ 250 ಅಂಕ ಏರಿಕೆ
ನವದಹೆಲಿ: ಸತತ ಎರಡನೇ ದಿನವೂ ಡಾಲರ್ ಎದುರು ರುಪಾಯಿ ಮೌಲ್ಯ ಚೇತರಿಕೆ ಕಂಡಿದ್ದು, ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ 250 ಅಂಕಗಳನ್ನು ಗಳಿಸಿಕೊಂಡಿದೆ.
ರಿಸರ್ವ್ ಬ್ಯಾಂಕಿನ ನೂತನ ಗವರ್ನರ್ ಆಗಿ ರಘುರಾಮ್ ರಾಜನ್ ಅವರು ಅಧಿಕಾರ ಸ್ವೀಕರಿಸಿದ ನಂತರ ಭಾರತೀಯ ಷೇರು ಮಾರುಕಟ್ಟೆ ಚೇತರಿಕೆ ಕಾಣುತ್ತಿದ್ದು, ಇಂದು ಕೂಡ ಸೆನ್ಸೆಕ್ಸ್ 250 ಅಂಕಗಳ ಚೇತರಿಕೆ ಕಾಣುವ ಮೂಲಕ ರುಪಾಯಿ ಮೌಲ್ಯ ಏರಿಕೆಯಾಗಿದೆ. ನಿನ್ನೆ ಪ್ರತಿ ಡಾಲರ್ನ ಬೆಲೆ 66.24 ಇದ್ದ ರುಪಾಯಿ ಮೌಲ್ಯ ಇಂದು 65.1ಕ್ಕೆ ಏರಿಕೆಯಾಗಿದೆ.
ಷೇರು ಮಾರುಕಟ್ಟೆಯ ಚೇತರಿಕೆಗೆ ನೂತನ ಆರ್ಬಿಐ ಗವರ್ನರ್ ರಘುರಾಮ್ ರಾಜನ್ ಅವರ ಮಾರುಕಟ್ಟೆ ಪ್ರೋತ್ಸಾಹಕ ನೀತಿಗಳು ಕಾರಣ ಎಂದು ಹೇಳಲಾಗುತ್ತಿದೆ. ಅಲ್ಲದೆ ನೂತನ ಗವರ್ನರ್ ಅವರು ನೀಡಿರುವ ಆಶ್ವಾಸನೆಯಿಂದಾಗಿ ಹೂಡಿಕೆದಾರರು ರುಪಾಯಿ ಮೇಲೆ ಹೆಚ್ಚಾಗಿ ಹೂಡಿಕೆ ಮಾಡುತ್ತಿದ್ದು ಇದು ಕೂಡ ರುಪಾಯಿ ಮೌಲ್ಯ ಏರಿಕೆಗೆ ಕಾರಣ ಎನ್ನಲಾಗುತ್ತಿದೆ. ಆದರೆ ರಷ್ಯಾದಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯು ಭಾರತ ಮಟ್ಟಿಗೆ ನಿರ್ಣಾಯಕವಾಗಿದ್ದು, ಶೃಂಗಸಭೆಯಲ್ಲಿ ಮೂಡಿಬರುವ ಪ್ರತಿಯೊಂದು ದೇಶದ ಅಭಿಪ್ರಾಯಗಳು ಭಾರತದ ಪಾಲಿಗೆ ಮಹತ್ವವಾಗಲಿದೆ.
ಏಕೆಂದರೆ ಭಾರತದಂತೆಯೇ ಹಲವು ಅಭಿವೃದ್ಧಿ ಶೀಲ ರಾಷ್ಟ್ರಗಳು ಆರ್ಥಿಕ ಕುಸಿತ ಕಂಡಿದ್ದು, ಈ ಎಲ್ಲ ರಾಷ್ಟ್ರಗಳು ಶೃಂಗಸಭೆಯಲ್ಲಿ ಆರ್ಥಿಕ ಚೇತರಿಕೆ ಕುರಿತಂತೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಅಲ್ಲದೆ ಸಿರಿಯಾ ವಿರುದ್ಧ ಯುದ್ಧಕ್ಕೆ ಮುಂದಾಗಿರುವ ಅಮೆರಿಕದ ನಿರ್ಧಾರದ ಕುರಿತು ಸಹ ಸಭೆಯಲ್ಲಿ ಚರ್ಚೆನಡೆಯುವ ಸಾಧ್ಯತೆ ಇದೆ. ಅಮೆರಿಕ ಕೈಗೊಂಡಿರುವ ನಿರ್ಧಾರ ಭಾರತದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದ್ದು, ಅಮೆರಿಕ ತನ್ನ ನಿಲುವು ಬದಲಿಸುವಂತೆ ಭಾರತ ಮನವಿ ಮಾಡುವ ಸಾಧ್ಯತೆ ಇದೆ.