ಜಗನ್ ವಿರುದ್ಧ ಮತ್ತೆ 3 ಹೊಸ ಆರೋಪ ಪಟ್ಟಿ ಸಲ್ಲಿಕೆ
ಹೈದರಾಬಾದ್: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೈ.ಎಸ್.ಜಗನ್ ವಿರುದ್ಧ ಸಿಬಿಐ ಅಧಿಕಾರಿಗಳು ಮತ್ತೆ 3 ಹೊಸ ಆರೋಪ ಪಟ್ಟಿಗಳನ್ನು ಸಲ್ಲಿಸಲಾಗಿದೆ.
ಅಕ್ರಮ ಆಸ್ತಿ ಗಳಿಕೆ ಉರುಳು ವೈ.ಎಸ್.ಜಗನ್ ಮೋಹನ್ ರೆಡ್ಡಿ ಕೊರಳಿಗೆ ಬಲವಾಗಿ ಸುತ್ತಿಕೊಳ್ಳುತ್ತಿದ್ದು, ಇಂದು ಸಿಬಿಐ ಅಧಿಕಾರಿಗಳು ಜಗನ್ ವಿರುದ್ಧ ಮತ್ತೆ 3 ಹೊಸ ಆರೋಪಪಟ್ಟಿಗಳನ್ನು ಸಲ್ಲಿಸಿದ್ದಾರೆ. ಇಂಡಿಯಾ ಸಿಮೆಂಟ್ಸ್, ಭಾರತಿ ಸಿಮೆಂಟ್ಸ್ ಮತ್ತು ಪೆನ್ನಾ ಸಿಮೆಂಟ್ಸ್ ಸಂಸ್ಥೆಗಳು ಮತ್ತು ಜಗನ್ ಮಾಲೀಕತ್ವ ಸಮೂಹ ಸಂಸ್ಥೆಗಳ ನಡುವಿನ ವ್ಯವಹಾರದ ಕುರಿತು 3 ಪ್ರತ್ಯೇಕ ಆರೋಪ ಪಟ್ಟಿಗಳನ್ನು ಸಲ್ಲಿಸಿರುವ ಸಿಬಿಐ ಅಧಿಕಾರಿಗಳು, ಈ ಮೂರು ಸಂಸ್ಥೆಗಳು ಜಗನ್ ಸಂಸ್ಥೆಗಳಲ್ಲಿ ಸುಮಾರು 140 ಕೋಟಿ ರುಪಾಯಿಗಳಷ್ಟು ಹೂಡಿಕೆ ಮಾಡಿವೆ ಎಂದು ಆರೋಪಿಸಿದ್ದಾರೆ.
ಜಗನ್ ತಂದೆ ವೈ.ಎಸ್.ರಾಜಶೇಖರ ರೆಡ್ಡಿ ಅವರು ಆಂಧ್ರ ಪ್ರದೇಶ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಗನ್ ಮೋಹನ್ ರೆಡ್ಡಿ ಅವರು, ತಮ್ಮ ತಂದೆಯ ಪ್ರಭಾವ ಬಳಸಿ ಇಂಡಿಯಾ ಸಿಮೆಂಟ್ಸ್, ಭಾರತಿ ಸಿಮೆಂಟ್ಸ್ ಮತ್ತು ಪೆನ್ನಾ ಸಿಮೆಂಟ್ಸ್ ಸಂಸ್ಥೆಗಳು ಆಂಧ್ರ ಪ್ರದೇಶದಲ್ಲಿ ಕಾರ್ಖಾನೆ ಸ್ಥಾಪಿಸಲು ಅನುವು ಮಾಡಿಕೊಟ್ಟಿದ್ದರು. ಇದಕ್ಕೆ ಬದಲಾಗಿ ಜಗನ್ ತಮ್ಮ ಸಮೂಹ ಸಂಸ್ಥೆಗಳಲ್ಲಿ ಸುಮಾರು 140 ಕೋಟಿ ಹೂಡಿಕೆ ಮಾಡಿಸಿಕೊಂಡಿದ್ದರು ಎಂದು ಆರೋಪಪಟ್ಟಿಯಲ್ಲಿ ಆರೋಪಿಸಲಾಗಿದೆ.
ಅಕ್ರಮ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಗನ್ ಮತ್ತು ಅವರ ಸಮೂಹ ಸಂಸ್ಥೆಯ ಆಡಿಟರ್ ವಿಜಯ ಸಾಯಿ ರೆಡ್ಡಿ ವಿರುದ್ಧ ಈಗಾಗಲೇ ಸಿಬಿಐ ಅಧಿಕಾರಿಗಳು 5 ಆರೋಪ ಪಟ್ಟಿ ಸಲ್ಲಿಸಿದ್ದು, ಇದೀಗ ಹೊಸದಾಗಿ ಸಲ್ಲಿಸಿರುವ 3 ಆರೋಪ ಪಟ್ಟಿಯೊಂದಿಗೆ ಪ್ರಕರಣ ಸಂಬಂಧ ಒಟ್ಟು 8 ಆರೋಪ ಪಟ್ಟಿಗಳು ದಾಖಲಾದಂತಾಗಿದೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಮತ್ತೆ 2 ಹೊಸ ಆರೋಪ ಪಟ್ಟಿಗಳನ್ನು ಸಲ್ಲಿಸಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪ ಪಟ್ಟಿಯಲ್ಲಿ ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ಹೆಸರು ಪ್ರಸ್ತಾಪ
ಈ ನಡುವೆ ಜಗನ್ ವಿರುದ್ಧ ಸಿಬಿಐ ಅಧಿಕಾರಿಗಳು ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ಅವರ ಹೆಸರು ಕೂಡ ಪ್ರಸ್ತಾಪವಾಗಿದೆ. ಪೆನ್ನಾ ಸಿಮೆಂಟ್ಸ್ನ ಮಾಲೀಕರು ಕೂಡ ಆಗಿರುವ ಶ್ರೀನಿವಾಸನ್ ಅವರು ಜಗನ್ ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಮತ್ತೋರ್ವ ಆರೋಪಿಯಾಗಿದ್ದಾರೆ ಎಂದು ಸಿಬಿಐ ವಾದಿಸಿದೆ.